ವಿಶೇಷ ಉಪನ್ಯಾಸ: ‘ಮಂಕುತಿಮ್ಮನ ಕಗ್ಗ-ಜೀವನ ಮೌಲ್ಯ’

ಉಜಿರೆ, ಫೆ.5: ಉತ್ತಮ ಮೌಲ್ಯಗಳಿಂದ ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜದ ಸುಭದ್ರತೆ ಸಾಧ್ಯವಾಗುತ್ತದೆ ಎಂದು ಪ್ರವಚನಕಾರ ಜಿ.ಎಸ್. ನಟೇಶ್ ಹೇಳಿದರು.

ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ‘ಮಂಕುತಿಮ್ಮನ ಕಗ್ಗ-ಜೀವನ ಮೌಲ್ಯ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಬೇಕಾದರೆ ಉತ್ತಮ ಮೌಲ್ಯಗಳು ವ್ಯಕ್ತಿಯಲ್ಲಿ ಬೆಳೆಯಬೇಕು. ಹೀಗಾದಾಗ ಮಾತ್ರ ಸಮಾಜದಲ್ಲಿ ಸುಭದ್ರತೆ ಸಾಧ್ಯವಾಗುತ್ತದೆ. ಉತ್ತಮ ಮೌಲ್ಯಗಳು ಕಣ್ಣಿಗೆ ಕಾಣದಿದ್ದರೂ ಜೀವನದ ಅಸ್ತಿತ್ವಕ್ಕೆ ಈ ಅಂಶಗಳೇ ಮಹತ್ವಪೂರ್ಣವಾಗುತ್ತದೆ ಎಂದರು.

“ಒಬ್ಬ ವ್ಯಕ್ತಿಯ ಬಾಹ್ಯ ಸೌಂದರ್ಯ ಎಂದಿಗೂ ಶಾಶ್ವತವಲ್ಲ. ಆ ವ್ಯಕ್ತಿಯ ಆತ್ಮ ಮತ್ತು ಅಂತರಂಗ ಶುದ್ಧಿಯಾದಾಗ ಮಾತ್ರ ಆತ ನಿಜವಾದ ಮನುಷ್ಯನಾಗುತ್ತಾನೆ. ವ್ಯಕ್ತಿಯ ನಡೆ-ನುಡಿಯಲ್ಲಿ ವಿನಯವಿರಬೇಕು. ಈ ವಿನಯತೆ ವ್ಯಕ್ತಿಯನ್ನು ಜೀವನದಲ್ಲಿ ಉತ್ತುಂಗಕ್ಕೆ ಕರೆದೊಯ್ಯುತ್ತದೆ” ಎಂದರು.

ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ಮಾತಿನ ಸಂಸ್ಕಾರ ಬಹಳ ಮುಖ್ಯವಾಗುತ್ತದೆ. ಒಬ್ಬ ವ್ಯಕ್ತಿ ಆಡುವ ಮಾತು ಆತನ ವ್ಯಕ್ತಿತ್ವದ ಚಿತ್ರಣವನ್ನು ನೀಡುತ್ತದೆ. ಹೀಗಾಗಿ ಮಾತಿನ ಮೇಲಿನ ಹಿಡಿತ ಬಹಳ ಮುಖ್ಯವಾಗುತ್ತದೆ. ಇದರ ಜೊತೆಗೆ ಮುಗ್ಧತೆಯ ಸಾಕಾರ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಆದಾಗ ಜೀವನದ ಮೌಲ್ಯ ತಾನಾಗಿಯೇ ವೃದ್ಧಿಯಾಗುತ್ತದೆ ಎಂದು ಅವರು ತಿಳಿಸಿದರು.

ಉಪನ್ಯಾಸದ ಮಧ್ಯದಲ್ಲಿ ಮಂಕುತಿಮ್ಮನ ಕಗ್ಗವನ್ನು ಹೇಳಿ ಅದರ ಸಾರವನ್ನು ಹೇಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಇದಲ್ಲದೇ ತಂದೆ ತಾಯಿಯ ಮಹತ್ವ, ಜೀವನದ ಮೌಲ್ಯ, ಮುಗ್ಧತೆಯ ಮಹತ್ವ ಮತ್ತು ಸಹಾಯ ಸಹಕಾರದ ಮನೋಭಾವ ಇನ್ನಿತರ ಮೌಲ್ಯಾಧಾರಿತ ವಿಚಾರಗಳನ್ನು ಕಗ್ಗದ ಮೂಲಕ ವಿವರಿಸಿದರು.

ಕಾರ್ಯಕ್ರಮವನ್ನು ಸಮ್ಮೇಳನದ ಸ್ಮರಣ ಸಂಚಿಕೆ ಸಮಿತಿಯ ಸಂಚಾಲಕ ಪ್ರೊ. ಗಣಪತಿ ಭಟ್ ಕುಳಮರ್ವ ನಿರೂಪಿಸಿದರು.

ವರದಿ: ಪ್ರಸೀದ್ ಭಟ್,

ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ ಚಿತ್ರ: ಶಶಿಧರ ನಾಯ್ಕ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

Related Posts

Leave a Reply

Your email address will not be published.