ಡಾ.ಬಿ.ಯಶೋವರ್ಮ ಶಿಕ್ಷಣ ವಲಯದ ಪ್ರೇರಕ ಶಕ್ತಿ: ಡಾ. ಸತೀಶ್ಚಂದ್ರ ಎಸ್

ಉಜಿರೆ: ಕಲಾಭಿಮಾನಿಯಾಗಿ, ಕಲಾ ಪೋಷಕರಾಗಿದ್ದ ಡಾ.ಬಿ.ಯಶೋವರ್ಮ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಚಿಂತನೆಗಳು ನಮ್ಮೆಲ್ಲರ ಪ್ರೇರಕ ಶಕ್ತಿ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಹೇಳಿದರು.

    ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ ಡಾ.ಬಿ.ಯಶೋವರ್ಮ ಅವರ ಸ್ಮರಣಾರ್ಥ ಕನ್ನಡ ವಿಭಾಗ ಆಯೋಜಿಸಿದ್ದ ‘ಅರಿವಿನ ದೀವಿಗೆ’ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

       ಕಲೆಯನ್ನು ಪೋಷಿಸುವುವ ವಿಷಯದಲ್ಲಿ ಅವರು ನಮಗೆಲ್ಲ ಮಾದರಿ. ಅವರ ಹಲವಾರು ಕ್ರಿಯಾತ್ಮಕ ಆಲೋಚನೆಗಳು ಮಹತ್ವಪೂರ್ಣ. ದೀವಿಗೆ ನಮಗೆಲ್ಲ ಬಾಹ್ಯ ದಾರಿಯನ್ನ ತೋರಿದರೆ ಅರಿವು ನಮಗೆ ಆಂತರಿಕ ದಾರಿ ತೋರುತ್ತದೆ ಎಂಬುದಕ್ಕೆ ಅವರು ದೊಡ್ಡ ಉದಾಹರಣೆ ಎಂದರು.

        ಈ ಸಂಧರ್ಭದಲ್ಲಿ ಲೇಖಕ ಡಾ ಬಾಳಾ ಸಾಹೇಬ ಲೋಕಾಪುರ ಅವರು  ‘ದಾನ ಚಿಂತಾಮಣ  ಅತ್ತಿಮಬ್ಬೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅತ್ತಿಮಬ್ಬೆ ಅವರ ಕಥಾ ಸಂಕಲನದ ವಿಷಯಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತೀ ಅವಶ್ಯP.  ಅವರ ಕಥಾ ಸಂಕಲನದಲ್ಲಿ ಪ್ರಸ್ತಾಪವಾದ ಅಂತರ್ಜಾತಿ ವಿವಾಹ, ತಾರತಮ್ಯ ಧೋರಣೆಗಳ ಬಗ್ಗೆ ಗಂಭೀರವಾದ ಚರ್ಚೆಯಾಗುವುದು ಅಗತ್ಯ, ಜೀವನದಲ್ಲಿ ಎಲ್ಲವನ್ನೂ ನೋಡಿದ ಬಾಹುಬಲಿ ಕೊನೆಗೆ ಆ ಜೀವನದಿಂದ ಬೇಸತ್ತು ವೈರಾಗಿಯಾಗಿ ನಮಗೆಲ್ಲ ಮಾದರಿಯಾಗಿದ್ದಾರೆ. ಅವರ ಚಿಂತನೆಗಳನ್ನು ನಮ್ಮೊಳಗೆ ಅಳವಡಿಸುವ ಪ್ರಯತ್ನ ನಮ್ಮಲ್ಲಿ ಸದಾ ನಡೆಯುತ್ತಿರಬೇಕು ಎಂದು ಹೇಳಿದರು.

    ಈ ಸಂಧರ್ಭದಲ್ಲಿ ಪ್ರಾಸ್ತಾವಿಕ ನುಡಿಯನ್ನಾಡಿದ ಎಸ್.ಡಿ.ಎಂ ಕಾಲೇಜಿನ ಕುಲಸಚಿವರು ಹಾಗೂ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ.ಬಿ.ಪಿ ಸಂಪತ್ ಕುಮಾರ್ ಮಾತನಾಡಿ ಅಧ್ಯಯನ ಡಾ.ಬಿ.ಯಶೋವರ್ಮ ಅವರ ಚಿಕಿತ್ಸಕ ದೃಷ್ಟಿಕೋನದ ಶಕ್ತಿಯಾಗಿತ್ತು ಎಂದು ನೆನಪಿಸಿಕೊಂಡರು. ತಾವು ಓದಿದ ಮಹತ್ವಪೂರ್ಣ ಕೃತಿಗಳ ಕುರಿತು ಅವರು ಚರ್ಚಿಸುತ್ತಿದ್ದ ರೀತಿ ವಿಶೇಷವಾದುದಾಗಿತ್ತು.  ನಿರಂತರ ಅಧ್ಯಯನಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದ್ದರು. ಆಡಳಿತಾತ್ಮಕ ಕಾರ್ಯಗಳ ಒತ್ತಡದ ನಡುವೆಯೂ ಅವರ ಓದುವ ಹವ್ಯಾಸ ಕಡಿಮೆಯಾಗಿರಲಿಲ್ಲ. ಓದಿದ ಪುಸ್ತಕಗಳು ವಿದ್ಯಾರ್ಥಿಗಳಿಗೂ ತಲುಪಬೇಕು ಎಂಬ ಸದುದ್ದೇಶದಿಂದ ಅವುಗಳನ್ನು ಕಾಲೇಜು ಗ್ರಂಥಾಲಯಕ್ಕೆ ತಲುಪಿಸುತ್ತಿದ್ದರು. ಅವರ ಕ್ರಿಯಾಶೀಲತೆ ಸದಾ ಸ್ಫೂರ್ತಿ ನೀಡುವಂತಿತ್ತು ಎಂದರು.

       ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಉದಯಚಂದ್ರ ಪಿ.ಎನ್, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಪಿ. ವಿಶ್ವನಾಥ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗ ಪ್ರಾಧ್ಯಾಪಕರಾದ ಡಾ. ರಾಜಶೇಖರ ಹಳೆಮನೆ ನಿರೂಪಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಸ್ವಾಗತಿಸಿ ವಿಭಾಗದ ಪ್ರಾಧ್ಯಾಪಕರಾದ ಡಾ. ದಿವಾಕರ ಕೊಕ್ಕಡ ವಂದಿಸಿದರು.

  ರಂಜಿತ್ ಕೆ.ಎಸ್

Related Posts

Leave a Reply

Your email address will not be published.