“ಶಿಕ್ಷಣವನ್ನೇ ಉಸಿರಾಗಿಸಿ, ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟ ವಜ್ರಕುಮಾರ್”

ಉಜಿರೆ, ಸೆ.6: ಧಾರವಾಡವನ್ನು ಕಾರ್ಯಕ್ಷೇತ್ರವನ್ನಾಗಿಸಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತ, ಉತ್ತರ ಕರ್ನಾಟಕ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ನಡುವೆ ಕೊಂಡಿಯಾಗಿ, ಜನಾನುರಾಗಿಯಾಗಿ ಬಾಳಿದವರು ಡಾ. ನ. ವಜ್ರಕುಮಾರ್ ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಉಪ ಪ್ರಾಂಶುಪಾಲ ಡಾ. ಎ. ಜಯ ಕುಮಾರ ಶೆಟ್ಟಿ ಹೇಳಿದರು.

ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ, ಇತ್ತೀಚೆಗೆ ನಿಧನರಾದ ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ. ನ. ವಜ್ರಕುಮಾರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣವನ್ನೇ ಉಸಿರಾಗಿಸಿ, ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟ ವಜ್ರಕುಮಾರ್ ಅವರು ತಮ್ಮ ದೂರದರ್ಶಿತ್ವ, ಕ್ರಿಯಾಶೀಲತೆ, ಕಾರ್ಯದಕ್ಷತೆ ಹಾಗೂ ಅಜಾತಶತ್ರು ಗುಣದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದರು ಎಂದು ಅವರು ಅಭಿಪ್ರಾಯಪಟ್ಟರು.

ವೀರೇಂದ್ರ ಹೆಗ್ಗಡೆ ಅವರ ಆಪ್ತರು ಹಾಗೂ ಉಡುಪಿಯ ಸುರಾಲು ಮೂಲದವರಾದ ಅವರು, ಧರ್ಮಸ್ಥಳ ಕ್ಷೇತ್ರವು ನೀಡಿದ ಧಾರವಾಡದ ಜನತಾ ಶಿಕ್ಷಣ ಸಮಿತಿಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಲ್ಲದೆ, ಎಂಜಿನಿಯರಿಂಗ್, ಡೆಂಟಲ್, ವೈದ್ಯಕೀಯ ಸಂಸ್ಥೆಗಳನ್ನೂ ಸ್ಥಾಪಿಸಿದರು. ಧಾರವಾಡದಲ್ಲಿ ಎಸ್.ಡಿ.ಎಂ. ಶಿಕ್ಷಣ ವ್ಯಾಪ್ತಿಯನ್ನೂ ವಿಸ್ತರಿಸಿದರು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಎನ್. ಉದಯಚಂದ್ರ ಹಾಗೂ ಪ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.