2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ – ದ.ಕ ಜಿಲ್ಲೆಯ ಅಮೂಲ್ಯ ಕಾಮತ್, ದೀಪಶ್ರೀ ರಾಜ್ಯಕ್ಕೆ ಪ್ರಥಮ

2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಆದರಂತೆ ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ವಿದ್ಯಾರ್ಥಿ ಜೀವನದ ಟರ್ನಿಂಗ್ ಪಾಯಿಂಟ್ ಎಂದೇ ಹೇಳಲ್ಪಡುವ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಕ್ಕೆ ಪ್ರಕಟವಾಗಿದೆ. ಬೆಂಗಳೂರಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ 2024-25ನೇ ಸಾಲಿನ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಪ್ರಕಟಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ 73.45ರಷ್ಟು ಫಲಿತಾಂಶ ಪ್ರಕಟವಾಗಿದೆ. ಉಡುಪಿ ಜಿಲ್ಲೆ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದರೆ ಉತ್ತರ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ ಎಂದು ಮಾಹಿತಿ ನೀಡಿದ್ರು.
ಇನ್ನು ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಅವರು ಮೊದಲ ರ್‍ಯಾಂಕ್ ಪಡೆದಿದ್ದಾರೆ. ಇವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 599 ಅಂಕ ಪಡೆದಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರೋದು ತುಂಬಾ ಖುಷಿ ಆಗಿದೆ. ನನ್ನ ಸಾಧನೆಗೆ ಶಿಕ್ಷಕರು, ಹೆತ್ತವರು,ಸಹಪಾಠಿಗಳು ಸಹಕರಿಸಿದ್ದಾರೆ.ಮುಂದೆ ನಾನು ಇಂಜಿನಿಯರ್ ಆಗಬೇಕೆಂಬ ಆಸೆ ಹೊಂದಿದೆ ಅಂತಾ ಹೇಳಿಕೊಂಡರು.
ಇನ್ನು ಕಾಮರ್ಸ್ ವಿಭಾಗದಲ್ಲಿ ಮಂಗಳೂರಿನ ಕೆನರಾ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ ಮೊದಲ ರ್‍ಯಾಂಕ್ ಗಳಿಸಿದ್ದಾರೆ. ಇವರು 600ಕ್ಕೆ 599 ಅಂಕ ಗಳಿಸಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ನನಗೆ ಖುಷಿ ತಂದಿದೆ. ಸಾಧನೆಗೆ ನನ್ನ ಹೆತ್ತವರು, ಶಿಕ್ಷಕರು ಜೊತೆಗೆ ನನ್ನ ಸಹಪಾಠಿಗಳು ಕಾರಣ ಎಂದು ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡ ವಿದ್ಯಾರ್ಥಿನಿ ದೀಪಶ್ರೀ ಹೇಳಿದರು.
ಒಟ್ಟಿನಲ್ಲಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಆದರಂತೆ ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರೋದು, ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದೆ.
