ಮಾಜಿ ಸಚಿವ ಎಂ.ಆರ್. ಸೀತಾರಾಂ ಬಿಜೆಪಿ ಸೇರದಂತೆ ಮನವೊಲಿಸಿ: ಚಿಕ್ಕಬಳ್ಳಾಪುರ ಬಲಿಜ ಮುಖಂಡರಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಗೆ ಮನವಿ

ಬೆಂಗಳೂರು, ಜು, 4; ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಬಲಿಜ ಜನಾಂಗದ ಹಿರಿಯ ಮುಖಂಡ, ಮಾಜಿ ಸಚಿವ ಎಂ.ಆರ್. ಸೀತಾರಾಂ ನಿರ್ಣಾಯಕ ಪಾತ್ರ ವಹಿಸಲಿದ್ದು, ಅವರು ಪಕ್ಷ ತೊರೆಯದಂತೆ ಮನವೊಲಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಲಿಜ ಜನಾಂಗದ ಮುಖಂಡರು ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರಿದ್ದಾರೆ.

ಬೆಂಗಳೂರಿನಲ್ಲಿಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಈ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವ ರೆಡ್ಡಿ, ಶಾಸಕರಾದ ಶಿವಶಂಕರ ರೆಡ್ಡಿ, ಸುಬ್ಬಾರೆಡ್ಡಿ, ಮಾಜಿ ಶಾಸಕ ಸಂಪಂಗಿ ಮತ್ತಿತರರು, ಸೀತಾರಾ ಅವರು ಪಕ್ಷ ತೊರೆದರೆ ಪಕ್ಷದ ಮೇಲೆ ಆಗಬಹುದಾದ ಪ್ರತಿಕೂಲ ಪರಿಣಾಮಗಳ ಕುರಿತು ಈ ನಾಯಕರಿಗೆ ಮಾಹಿತಿ ನೀಡಿದರು.

ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಲಿಜ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದ್ದು, ಚುನಾವಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಬಲಿಜ ಜನಾಂಗದ ಮೇಲೆ ಮಾಜಿ ಸಚಿವ ಎಂ.ಆರ್. ಸೀತಾರಾಂ ಅವರು ಹಿಡಿತ ಹೊಂದಿದ್ದಾರೆ. ಈ ಭಾಗದಲ್ಲಿ ಅವರ ಕುಟುಂಬದ ಬಗ್ಗೆ ತಲಾಂತರದಿಂದಲೂ ಗೌರವ ಭಾವನೆ ಇದೆ. ಇಂತಹ ಕುಟುಂಬ ಮತ್ತು ನಾಯಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಕೆಲಸ ಆಗಬೇಕು. ಹೀಗಾಗಿ ಸೀತಾರಾಂ ಅವರು ಯಾವುದೇ ಕಾರಣಕ್ಕೂ ಪಕ್ಷ ತೊರೆಯದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ತಕ್ಷಣವೇ ಸೀತಾರಾಂ ಅವರನ್ನು ಕರೆಸಿ ಕರೆಸಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಮನವೊಲಿಸಿ. ಈ ಎರಡೂ ಜಿಲ್ಲೆಗಳು ಇದೀಗ ಕಾಂಗ್ರೆಸ್ ನಿಯಂತ್ರಣದಲ್ಲಿದೆ. ಒಮ್ಮೆ ಕೈಬಿಟ್ಟು ಬಿಜೆಪಿ ತೆಕ್ಕೆಗೆ ಜಾರಿದರೆ ಮತ್ತೆ ಕಾಂಗ್ರೆಸ್ ವಶಮಾಡಿಕೊಳ್ಳುವುದು ಕಷ್ಟ. ಹೀಗಾಗಿ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಬಗೆಹರಿಸಬೇಕು. ಸೀತಾರಾಂ ಅವರನ್ನು ಕಾಂಗ್ರೆಸ್ ನಲ್ಲೇ ಉಳಿಸಿಕೊಳ್ಳಬೇಕು. ಮುಂದಿನ ಸರ್ಕಾರ ರಚನೆಗೆ ಇಂತಹ ನಾಯಕರು ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ ಎಂದು ಈ ಮುಖಂಡರು ಮನವಿ ಮಾಡಿದ್ದಾರೆ.

ಬಲಿಜ ಜನಾಂಗದ ಮುಖಂಡರ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ಕೆಲವೊಂದು ವಿಚಾರದಲ್ಲಿ ಸೀತಾರಾಂ ಅವರು ಅಸಮಾಧಾನಗೊಂಡಿದ್ದಾರೆ. ಅವರ ಜೊತೆ ಒಮ್ಮೆ ಮಾತುಕತೆ ನಡೆಸಿದ್ದೇನೆ. ಮತ್ತೊಮ್ಮೆ ಅವರೊಂದಿಗೆ ಚರ್ಚಿಸಿ ಮನವೊಲಿಸುತ್ತೇನೆ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪ್ರತಿಯೊಬ್ಬ ಮುಖಂಡರು ಸಹ ಅಗತ್ಯ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದಾಗಿ ತಿಳಿಸಿದ್ದಾರೆ.

Related Posts

Leave a Reply

Your email address will not be published.