ಸೋಮೇಶ್ವರ : ಸಿ.ಸಿ.ಟಿವಿ ಪುಡಿಗೈದ ಮರಳು ಕಳ್ಳರ ಬಂಧನ
ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಹಾಕಿದ್ದ ಸಿಸಿಟಿವಿ ಮತ್ತು ತಡೆಬೇಲಿಯನ್ನು ಧ್ವಂಸಗೈದ ನಾಲ್ವರು ಆರೋಪಿಗಳನ್ನು ,ಬಳಸಿದ್ದ ಟಿಪ್ಪರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಬಂಧಿತರನ್ನು ಮಡ್ಯಾರ್ ಸಾಯಿನಗರ ನಿವಾಸಿ ಸೂರಜ್, ಮುಡಿಪು ಮದ್ಯನಡ್ಕ ನಿವಾಸಿ ಇಕ್ಬಾಲ್, ತಲಪಾಡಿ ನಿವಾಸಿ ಅಖಿಲ್, ಸೋಮೇಶ್ವರ ಮೂಡಾ ನಿವಾಸಿ ಪ್ರಜ್ವಲ್ ಬಂದಿತರಾಗಿದ್ದು, ಕೃತ್ಯಕ್ಕೆ ಬಳಸಿದ್ದ ಟಿಪ್ಪರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸೋಮೇಶ್ವರ ದೇವಸ್ಥಾನ ಮತ್ತು ಸೋಮೇಶ್ವರ ಮೂಡಾ ಬೀಚ್ ಬಳಿಯಿಂದ ನಿರಂತರವಾಗಿ ಸಮುದ್ರ ದಡದಿಂದ ಮರಳು ಸಾಗಾಟ ನಡೆಯುತ್ತಿದ್ದು, ಸ್ಥಳೀಯರ ದೂರಿನಂತೆ ಜಿಲ್ಲಾಅಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿತ್ತು. ಸೆ. 10ರದು ತಡರಾತ್ರಿ ಮುಸಕು ಹಾಕಿದ ಅಪರಿಚಿತರು ಸಿಸಿಟಿವಿಯನ್ನು ಕೈಯಿಂದ ಧ್ವಂಸಗೊಳಿಸಿದ್ದು, ಸೋಮೇಶ್ವರ ಬೀಚ್ ಬಳಿ ಟಿಪ್ಪರ್ ಮೂಲಕ ಸಿಸಿಟಿವಿಯನ್ನು ಧ್ವಂಸಗೈದಿದ್ದರು.
ಘಟನೆ ನಡೆದು ಎರಡು ದಿನಗಳ ಬಳಿಕ ಅಧಿಕಾರಿಗಳು ದೂರು ನೀಡಿದ್ದು , ಉಳ್ಳಾಲ ತಾಲೂಕು ಕಂದಾಯ ಅಧಿಕಾರಿ ನೀಡಿದ ದೂರಿನಂತೆ ಆರೋಪಿಗಳನ್ನು ಬಂಧಿಸುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾದ್ಯಮಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನದ ವರದಿ ಬರುತ್ತಿದ್ದಂತೆ ಪೊಲೀಸರಿಗೆ ದೂರು ನೀಡಲಾಗಿತ್ತು. ಎರಡು ದಿನ ರಜೆ ಇದ್ದ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.