ಜಲೀಲ್ ಕುಟುಂಬಕ್ಕೆ ನಾಗರಿಕ ಸಂಘಟನೆಗಳ ಪ್ರತಿನಿಧಿಗಳಿಂದ ಸಾಂತ್ವನ.

ಮತಾಂಧ ಕ್ರಿಮಿನಲ್ ಗಳಿಂದ ಕೊಲೆಗೀಡಾದ ಕಾಟಿಪಳ್ಳದ ಜಲೀಲ್ ನಿವಾಸಕ್ಕೆ ಮಂಗಳೂರಿನ ನಾಗರಿಕ ಸಂಘಟನೆಗಳು, ಜಾತ್ಯಾತೀತ ಪಕ್ಷಗಳ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿತು. ಕೊಲೆಗಡುಕರಿಗೆ ಶಿಕ್ಷೆ ನೀಡಲು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ನಡೆಸುವ ಪ್ರಯತ್ನದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿತು.

ಯಾರ ತಂಟೆತಕರಾರಿಗೂ ಹೋಗದ, ತನ್ನ ಪಾಡಿಗೆ ಬದುಕು ನಡೆಸುತ್ತಿದ್ದ ಜಲೀಲ್ ಹತ್ಯೆ ಮತಾಂಧ ಶಕ್ತಿಗಳಿಂದ ಕುರುಡು ಕೋಮುದ್ವೇಷದಿಂದ ನಡೆದಿರುವುದು ಅಲ್ಪಸಂಖ್ಯಾತ ಸಮುದಾಯದಲ್ಲಿ ಆತಂಕ, ಅಭದ್ರತೆ ಮೂಡಿಸಿದೆ. ಸಮಾಜದಲ್ಲಿ ಭೀತಿಯ ವಾತಾವರಣ ‌ನಿರ್ಮಾಣಗೊಂಡಿದೆ, ಜಲೀಲ್ ಮಡದಿ ಹಾಗೂ ಹತ್ತು ತಿಂಗಳ ಮಗು ಅನಾಥವಾಗಿದೆ. ಈ ಸಂದರ್ಭದಲ್ಲಿ ಕೊಲೆಯನ್ನು ಬಲವಾಗಿ ಖಂಡಿಸುವುದು, ಸಂತ್ರಸ್ತ ಕುಟುಂಬದ ಜೊತೆ ನಿಲ್ಲುವುದು, ಆತಂಕಕ್ಕೊಳಗಾಗಿರುವ ಸಮುದಾಯದ ನ್ಯಾಯದ ಬೇಡಿಕೆಗೆ ಧ್ವನಿಗೂಡಿಸುವುದು ನಾಗರಿಕ ಸಮಾಜದ ಜವಾಬ್ದಾರಿ‌. ಆ ಉದ್ದೇಶದ ಭಾಗವಾಗಿ ವಿವಿಧ ಸಮುದಾಯಗಳಿಗೆ ಸೇರಿದ ಮಂಗಳೂರಿನ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಕೊಲೆಗೀಡಾದ ಜಲೀಲ್ ಮನೆಗೆ ಭೇಟಿ ನೀಡಿದ್ದೇವೆ ಎಂದು ಪ್ರತಿನಿಧಿಗಳ ನಿಯೋಗ ಹೇಳಿಕೆಯಲ್ಲಿ ತಿಳಿಸಿದೆ‌.

ನಿಷ್ಪಕ್ಷಪಾತ ತನಿಖೆ ನಡೆಯಬೇಕು, ಕೊಲೆಗೆ ಪ್ರಚೋದನೆ ನೀಡಿದವರನ್ನು ಬಯಲಿಗೆ ತರಬೇಕು, ಕುಟುಂಬಕ್ಕೆ ಸರಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ನಿಯೋಗ ಆಗ್ರಹಿಸಿತು. ವಿನಾಕಾರಣ ಕೊಲೆಗೀಡಾದ ಜಲೀಲ್ ರ ಸಂತ್ರಸ್ತ ಕುಟುಂಬವನ್ನು ಶಾಸಕ ಭರತ್ ಶೆಟ್ಟಿ ಸೌಜನ್ಯಕ್ಕೂ ಭೇಟಿಯಾಗದಿರುವುದನ್ನು ನಾಗರಿಕರ ನಿಯೋಗ ಬಲವಾಗಿ ಖಂಡಿಸಿತು, ಹಾಗೂ ಶಾಸಕರು ತಕ್ಷಣ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ ಧೈರ್ಯ ತುಂಬಬೇಕು, ಪರಿಹಾರ ಕೊಡಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿತು.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಹಿರಿಯ ದಲಿತ ನಾಯಕರಾದ ಎಂ ದೇವದಾಸ್, ರಘು ಎಕ್ಕಾರು, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ ಮುಂದಾಳು ವಿ ಕುಕ್ಯಾನ್, ಮಾಜಿ ಮೇಯರ್, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್, ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್, ಮಾಜಿ ಉಪಮೇಯರ್ ಗಳಾದ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್‌ ಕುಂಜತ್ತಬೈಲ್, ಜಯ ಕರ್ನಾಟಕ ಸುರತ್ಕಲ್ ಅಧ್ಯಕ್ಷರಾದ ವೈ ರಾಘವೇಂದ್ರ ರಾವ್, ಕಾರ್ಮಿಕ ನಾಯಕರುಗಳಾದ ಸದಾಶಿವ ಶೆಟ್ಟಿ ಸುರತ್ಕಲ್, ಕರುಣಾಕರ ಮಾರಿಪಳ್ಳ, ಮಾಜಿ ಕಾರ್ಪೊರೇಟರ್ ಗಳಾದ ದಯಾನಂದ ಶೆಟ್ಟಿ, ಅಯಾಝ್ ಕೃಷ್ಣಾಪುರ, ಅಬೂಬಕ್ಕರ್ ಕುದ್ರೋಳಿ, ಡಿವೈಎಫ್ಐ ಪದಾಧಿಕಾರಿಗಳಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್, ರಫೀಕ್ ಹರೇಕಳ, ಮುಸ್ಲಿಂ ಐಕ್ಯತಾ ವೇದಿಕೆಯ ಯಾಸೀನ್ ಕುದ್ರೋಳಿ, ಅಶ್ರಫ್ ಕಾನ, ಸಾಮಾಜಿಕ ಕಾರ್ಯಕರ್ತರಾದ ಪ್ರಮೀಳಾ ದೇವಾಡಿಗ, ಅಸುಂತಾ ಡಿ ಸೋಜ, ಪ್ರಮೀಳಾ ಕಾವೂರು, ಸಿಲ್ವಿಯಾ ಜೋಕಟ್ಟೆ, ಆಶಾ ಬೋಳೂರು, ಶ್ರೀಕಾಂತ್ ಸಾಲ್ಯಾನ್, ಮೂಸಬ್ಬ ಪಕ್ಷಿಕೆರೆ, ಶಾಹುಲ್ ಹಮೀದ್ ಬಜ್ಪೆ, ಸಾಲಿ ಮರವೂರು, ಸಿರಾಜ್ ಬಜ್ಪೆ, ಬಶೀರ್ ಕೃಷ್ಣಾಪುರ, ನಾಸಿರ್ ಕೃಷ್ಣಾಪುರ, ಸ್ಥಳೀಯ ಮುಸ್ಲಿಂ ಜಮಾತ್ ಅಧ್ಯಕ್ಷ ಅಬ್ದುಲ್ ರಕೀಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.