ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ವಿದ್ಯಾವಂತ, ಶಿಕ್ಷಕನೇ ಅಭ್ಯರ್ಥಿಯಾಗಿ ಪ್ರತಿನಿಧಿಸಬೇಕು: ಡಾ.ನರೇಶ್ಚಂದ್ ಹೆಗ್ಡೆ

ನೈಋತ್ಯ ಶಿಕ್ಷಕರ ಕ್ಷೇತ್ರ ಅತ್ಯಂತ ಸುಶಿಕ್ಷಿತ ಮತದಾರರ ಕ್ಷೇತ್ರವೆನಿಸಿದೆ.ಇಲ್ಲಿನ ಮತದಾರರು ಕನಿಷ್ಠ ಎರೆಡೆರಡು ಪದವಿಗಳನ್ನು ಪಡೆದವರು ಈ ಕ್ಷೇತ್ರವನ್ನು ವಿದ್ಯಾವಂತ ಮತ್ತು ಸ್ವತಃ ಶಿಕ್ಷಕನೇ ಆಗಿರುವ ಅಭ್ಯರ್ಥಿಯೇ ಪ್ರತಿನಿಧಿಸಬೇಕು ಎಂಬ ಪರಿಕಲ್ಪನೆಯಡಿ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ತಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ವಹಿಸಿರುವುದಾಗಿ ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ತಿಳಿಸಿದ್ದಾರೆ.
ಅವರು ನಗರದ ಓಶಿಯನ್ ಪರ್ಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೈರುತ್ಯ ಶಿಕ್ಷಕರ ಕ್ಷೇತ್ರ ರಚನೆಯಾದ ಬಳಿಕ ಎಲ್ಲೋ ಒಂದೆರಡು ಸಂದರ್ಭಗಳನ್ನು ಹೊರತುಪಡಿಸಿ ರಾಜಕಾರಣಿಗಳು, ಶಿಕ್ಷಕರೇ ಅಲ್ಲದವರು, ಕೆಲವೊಂದು ಸಂದರ್ಭಗಳಲ್ಲಿ ಪದವಿಯನ್ನೇ ಪಡೆಯದವರು ಈ ಸುಶಿಕ್ಷಿತ ಮತದಾರರ ಕ್ಷೇತ್ರದ ಪ್ರತಿನಿಧಿಯಾಗಿ ಪ್ರತಿನಿಧಿಸುತ್ತಿರುವುದು ಮಾತ್ರ ವಿಪರ್ಯಾಸ ಎಂದು ಅವರು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾದಲ್ಲಿ ಪ್ರಾಥಮಿಕ ಶಾಲಾ ಹಂತದಿಂದ ವೃತ್ತಿ ಶಿಕ್ಷಣ ಕಾಲೇಜುಗಳ ವಿವಿಧ ಹಂತಗಳ ಶೈಕ್ಷಣಿಕ ಸಂಸ್ಥೆಗಳ, ಭಾಷಾ ಮಾಧ್ಯಮದ, ಬೋಧಕ , ಬೋಧಕೇತರ, ಸರಕಾರಿ,ಅನುದಾನಿತ ಮತ್ತು ಅನುದಾನರಹಿತ ವಿದ್ಯಾಸಂಸ್ಥೆ ಆಡಳಿತ ಮಂಡಳಿಗಳ ಬಹುಮುಖಿ ಸಮಸ್ಯೆಗಳನ್ನು ತಜ್ಞರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಲು ಕಾರ್ಯೋನ್ಮುಖವಾಗುವುದಾಗಿ ತಿಳಿಸಿದರು.
ಶಿಕ್ಷಕರಿಗೆ ಉತ್ತಮ ತರಬೇತಿ ನೀಡುವ ಶಿಕ್ಷಣ ಸಂಸ್ಥೆಗಳ ನಿರ್ಮಾಣ ಅಗತ್ಯ. ಅದೇ ರೀತಿ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದಾಗಿ ಹೇಳಿದರು.