ಚರ್ಚ್ ಸಭಾಂಗಣ ಉದ್ಘಾಟಿಸಿದ ಭಟ್ರು !ತೊಕ್ಕೋಟ್ಟಿನಲ್ಲೊಂದು ಸೌಹಾರ್ದ ಕಾರ್ಯಕ್ರಮ

ತೊಕ್ಕೋಟು ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಇಗರ್ಜಿ ಬಳಿಯಲ್ಲಿ ಸಂತ ಸೆಬಾಸ್ತಿಯನ್ ಅಡಿಟೋರಿಯಂ ಹೆಸರಿನ ಸುಸಜ್ಜಿತವಾದ ಮದುವೆ ಸಮಾರಂಭಕ್ಕೆ ಯೋಗ್ಯವಾದ ಸಭಾಂಗಣ ವೊಂದು ಉದ್ಘಾಟನೆ ಗೊಂಡಿತು. ಸರ್ವ ಧರ್ಮ ಸಮನ್ವಯತೆಯ ಸಂದೇಶ ಸಾರುವ ರೀತಿಯಲ್ಲಿ ಈ ಸಮಾರಂಭ ಏರ್ಪಟ್ಟಿತ್ತು. ಹಿಂದೂ ಮುಸ್ಲಿಂ ಕ್ರೈಸ್ತ ಸಮುದಾಯದ ಬಾಂಧವರು ವೇದಿಕೆಯಲ್ಲಿ ಆಸನ ಅಲಂಕರಿಸಿದ್ದರು. ಈ ವೇದಿಕೆಯಲ್ಲಿದ್ದವರೆಲ್ಲರೂ ಗಣ್ಯರೇ. ಆ ಪೈಕಿ ಸಭಾಂಗಣವನ್ನು ಉದ್ಘಾಟಿಸಿದ ಡಾ|| ಯು.ಸಿ. ಶ್ರೀನಿವಾಸ ಭಟ್ ರವರ ಬಗ್ಗೆ ಒಂದೆರಡು ಅಭಿಪ್ರಾಯವನ್ನು ಹೇಳಬೇಕೆನಿಸುತ್ತದೆ.

ಈ ವೈದ್ಯರು ಸುಮಾರು ನಲ್ವತ್ತು ವರ್ಷಗಳಿಗಿಂತಲೂ ದೀರ್ಘ ಅವಧಿಯಲ್ಲಿ ತೊಕ್ಕೋಟು ಒಳಪೇಟೆಯಲ್ಲಿ ಚಿಕ್ಕದೊಂದು ಔಷದಾಲಯ ತೆರೆದು ಸೇವೆ ಮಾಡುತ್ತಿದ್ದರು. ಅವರು ನಮ್ಮಂತೆ ಇನ್ನೂ ಹಲವರಿಗೆ ಫ್ಯಾಮಿಲಿ ವೈದ್ಯರಾಗಿದ್ದರು.ಏನೇ ಕಾಯಿಲೆ ಬಂದರೂ ಅವರ ಬಳಿಗೆ ಹೋಗಿ ಔಷದ ಅಥವಾ ಸಲಹೆ ಪಡೆಯುವ ಜನರು ದೊಡ್ಡ ಸಂಖ್ಯೆಯಲ್ಲಿದ್ದರು. ಅವರು ಪಡೆಯುತ್ತಿದ್ದ ಶುಲ್ಕ 10ರಿಂದ 20ರೂಪೈಯಷ್ಟೆ ಇರುತ್ತಿತ್ತು. ವಯಸ್ಸಾದವರು ಹಣವಿಲ್ಲದೆ ಚಿಕಿತ್ಸೆಗೆ ಬಂದರೆ ಚಿಕಿತ್ಸೆ ಕೊಟ್ಟೇ ಕಳುಹಿಸುತ್ತಿದ್ದ ಒಬ್ಬ ಮಾನವೀಯ ಕಳಕಳಿಯುಳ್ಳ ವೈದ್ಯರಾಗಿದ್ದರು.
ತನ್ನ ವೈದ್ಯ ವ್ರತ್ತಿಯನ್ನು ಹಣ ಮಾಡುವ ದಂಧೆ ಯಾಗಿಸಲಿಲ್ಲ. ಆ ಕಾರಣಕ್ಕಾಗಿಯೋ ಎಂಬಂತೆ ಅವರು ಈ ಪರಿಸರದಲ್ಲಿ ಒಬ್ಬ ಜನಾನುರಾಗಿ ವೈದ್ಯರೆನಿಸಿಕೊಂಡಿದ್ದರು.

ಇವರ ತಂದೆಯವರು ತೊಕ್ಕೋಟಿನ ಕ್ರಷ್ಣನಗರ ಅದರಾಚೆಗಿನ ಭಟ್ನಗರ ಪಿಲಾರು ಮುಂತಾದ ಕಡೆಗಳಲ್ಲಿ ನೂರಾರು ಎಕರೆ ಭೂಮಿಯ ಒಡೆಯರಾಗಿದ್ದರು. ವಕೀಲಿ ವ್ರತ್ತಿಯ ತಂದೆಯವರು ಈ ಭೂಮಿಯನ್ನೆಲ್ಲಾ ಗೇಣಿಗೆ ಕೊಟ್ಟು ,ಕೊಟ್ಟ ಗೇಣಿಗೆ ಒಂದು ಚೀಟಿ ಕೊಡುವ ಉದಾರತೆ ತೋರುತ್ತಿದ್ದ ಮಹಾನ್ ವ್ಯಕ್ತಿಯಾಗಿದ್ದರು. ಭೂಸುಧಾರಣಾ ಕಾಯಿದೆ ಬಂದಾಗ ಯಾವುದೇ ಸ್ವಾರ್ಥ ತೋರದೆ ಗೇಣಿದಾರರಿಗೆ ಆ ಭೂಮಿಯನ್ನೆಲ್ಲ ಬಿಟ್ಟು ಕೊಟ್ಟಿದ್ದರು. ಸೋಮೇಶ್ವರದ ಸೋಮನಾಥ ದೇವಸ್ಥಾನ ಹಾಗೂ ಉಳ್ಳಾಲ ಉಳಿಯ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದಲ್ಲಿ ಗೌರವಾನ್ವಿತ ಆಡಳಿತ ಮೊಕ್ತೇಸರರಾಗಿದ್ದರು.

ಅವರ ಮಗ ಯು.ಸಿ.ಎಸ್. ಭಟ್ ರವರು ವೈದ್ಯ ವ್ರತ್ತಿಗಾಗಿ ಅದೇ ತೊಕ್ಕೋಟಿನಲ್ಲಿ ಬೇರೊಬ್ಬರ ಚಿಕ್ಕದಾದ 10×15ಅಡಿ ಉದ್ದಗಲದ ಅಂಗಡಿ ಕಟ್ಟಡವನ್ನು ಬಾಡಿಗೆಗೆ ಪಡೆದು ಡಿಸ್ಪೆನ್ಸರಿ ನಡೆಸುತ್ತಿದ್ದರು. ತಂದೆ ತನಗೆ ಜೀವನಾಧಾರಕ್ಕೆ ಬೇಕಾದಂತ ವಿದ್ಯೆ ಕೊಡಿಸಿದ್ದಾರೆ. ಹೆಚ್ಚಿನದ್ದನ್ನು ಅವರಿಂದೇನೂ ಅಪೇಕ್ಷಿಸುವುದಿಲ್ಲ ಎಂದೊಮ್ಮೆ ನನ್ನಲ್ಲಿ ಹೇಳಿದ್ದರು. ಔಷಧಿಗಾಗಿ ಬರುತ್ತಿದ್ದವರ ಕುಟುಂಬದ ಸದಸ್ಯರ ಪರಿಚಯವನ್ನು ಮನನ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯಾಗಿದ್ದರು. ಬಂದವರ ಹಾಗೂ ಮನೆಯವರ ಸುಖಕಷ್ಟ ಸಮಾಚಾರ ಕೇಳಿ ತಿಳಿದುಕೊಳ್ಳುವುದರಲ್ಲಿ ಅವರು ತೋರುತ್ತಿದ್ದ ಪ್ರೀತಿತುಂಬಿದ ಕಾಳಜಿಯಿಂದಲೇ ಅರೆವಾಸಿ ಕಾಯಿಲೆ ವಾಸಿಯಾಗುತ್ತಿತ್ತೆಂಬ ನಂಬಿಕೆ ಜನರಲ್ಲಿತ್ತು.

ಸುಮಾರು ಹತ್ತು ವರ್ಷಗಳ ಹಿಂದೆ ಇವರಿದ್ದ ಬಾಡಿಗೆ ಕಟ್ಟಡವನ್ನು ಬಿಟ್ಟು ಕೊಡಬೇಕೆಂದು ಅದರ ಮಾಲಕರು ಕೇಳಿಕೊಂಡರು.
40ವರ್ಷಗಳಿಂದಿದ್ದ ಶಾಪನ್ನು ಬಿಟ್ಟು ಕೊಡಲಾರೆ ಎಂದು ಹೇಳುವ ಮನುಷ್ಯ ಅವರಲ್ಲ. ಶಕ್ತಿಕುಂದಿದ ಅವರ ದೇಹಬಲದ ಮೇಲೆ ಅವರಿಗಿದ್ದ ವಿಶ್ವಾಸ ಕಡಿಮೆಯಿತ್ತು. ಇನ್ನೇನಿದ್ದರೂ 2?3ವರ್ಷ ಸೇವೆ ಸಲ್ಲಿಸಬಹುದಷ್ಟೆ. ಅಷ್ಟೊಂದು ಅವಕಾಶ ಕೊಡಿ ಮತ್ತೆ ನಾನೇ ಬಿಟ್ಟು ಹೋಗ್ತೇನೆ ಎಂದಾಗ ಮಾಲಕರಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದರಿಂದ ಅನಿವಾರ್ಯವಾಗಿ ಒ?ಷಧಾಲಯ ಕಟ್ಟಡವ ನ್ನು ಬಿಟ್ಟು ಕೊಡಬೇಕಾಯ್ತು.
ನಂತರದಲ್ಲಿ ಕೊಡಿಯಾಲಬೈಲಿನಲ್ಲಿದ್ದ ವಸತಿ ಸಮುಚ್ಚಯದಲ್ಲಿನ ಅವರ ಮನೆ ಸೇರಿಕೊಂಡರು.

ಬೇರೆಲ್ಲೂ ಡಿಸ್ಪೆನ್ಸರಿ ತೆರೆಯುವ ಮನಸ್ಸು ಮಾಡಲಿಲ್ಲ. ಅವರ ಬಳಿ ಚಿಕಿತ್ಸೆಗೆ ಬರುತ್ತಿದ್ದವರು ಕಂಗೆಟ್ಟಂತಾದರು. ಜನರ ನಡುವೆ ಸದಾ ಹಸನ್ಮುಖಿಯಾಗಿ ,ಅವರಲ್ಲಿ ಬರುತ್ತಿದ್ದ ಪ್ರತಿಯೊಬ್ಬರನ್ನು ಮಾತಾಡಿಸುತ್ತಾ ದಿನ ಕಳೆಯುತ್ತಿದ್ದ ಆ ಜೀವಕ್ಕೆ ಪತ್ನಿ ಬಳಿಯಲ್ಲಿದ್ದರೂ ಒಂಟಿತನದ ಭಾವ ಅಂಟಿಕೊಂಡಿತು. ಡಾ| ಯು.ಸಿ. ಎಸ್. ಭಟ್ ರವರು ನವೆಂಬರ ಒಂದರಂದು ತೊಕ್ಕೋಟಿನ ಸೆಬಾಸ್ತಿಯನ್ ಹಾಲ್ ಉದ್ಘಾಟನೆಗೆ ಬರುತ್ತಾರೆಂಬ ಸುದ್ದಿ ತಿಳಿದು ಬಹಳಷ್ಟು ಮಂದಿ ಅವರನ್ನು ಕಾಣಲೆಂದು ಕಾತರರಾಗಿ ಅಲ್ಲಿಗೆ ಬಂದಿದ್ದರು. ನಾನು ಮತ್ತು ನನ್ನ ಪತ್ನಿ ಇಬ್ಬರೂ ಆ ಸಮಾರಂಭದ ಕೊನೆಯವರೆಗೂ ನಿಂತು ಅವರನ್ನು ಮಾತಾಡಿಸಿದೆವು.

ಇಳಿವಯಸ್ಸು ಅವರ ದೇಹದ ಶಕ್ತಿಯನ್ನು ಲಯ ಮಾಡುತ್ತಿದೆ. ಮೆಟ್ಟಿಲು ಇಳಿಯುವಾಗ ಮತ್ತು ಹತ್ತುವಾಗ ಬೇರೆಯವರ ಸಹಾಯವನ್ನು ಯಾಚಿಸುತ್ತಿವೆ. ಆ ಸಹಾಯಕ್ಕೆ ಅಲ್ಲಿ ನನ್ನ ಕೈ ಮುಂದಾಯಿತು.ವೇದಿಕೆಯಲ್ಲಿ ಅವರನ್ನು ಸನ್ಮಾನಿಸಿದಾಗ ಸಿಕ್ಕಂತಹ ಹಾರ ತುರಾಯಿ ಫಲವಸ್ತುಗಳನ್ನೆಲ್ಲ ನಾನು ಕೈಯಲ್ಲಿಡಿದು ಅವರ ಜೊತೆಗೆ ಹೆಜ್ಜೆ ಹಾಕಿದೆ.

ಅತಿಥಿಗಳಿಗೆ ಧರ್ಮಗುರುಗಳೊಂದಿಗೆ ಊಟದ ವ್ಯವಸ್ಥೆಯನ್ನು ಪ್ರತ್ಯೇಕ ಕೊಠಡಿಯೊಂದರಲ್ಲಿ ಏರ್ಪಡಿಸಿದ್ದರು. ಡಾಕ್ಟರನ್ನು ಮತ್ತವರ ಇಬ್ಬರು ಮಕ್ಕಳನ್ನು(ಮುಂಬೈಯಲ್ಲಿರುವ ಮಗಳು ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಮಗನು ಸಮಾರಂಭಕ್ಕೆ ಬಂದಿದ್ದರು.)
ಅತಿಥಿ ಸತ್ಕಾರದ ಕೊಠಡಿಗೆ ಕರಕೊಂಡು ಹೋದೆನು.? ನಾವೆಲ್ಲ ಒಟ್ಟಿಗೆ ಕುಳಿತು ಭೋಜನ ಮುಗಿಸಿದ ಮೇಲೆ ಕಾರಿನಲ್ಲಿ ಕೂರಿಸುವಾಗ ನನ್ನ ಪರಿಚಯವನ್ನು ಅವರ ಮಗನಲ್ಲಿ ಹೇಳಿದರು. “ಸುಮಾರು 15ವರ್ಷಗಳ ಹಿಂದೆ ಒಂದು ದಿನ ತೊಕ್ಕೋಟು ಪೇಟೆ ಪರಿಸರವು ಇದ್ದಕ್ಕಿದ್ದಂತೆ ಪ್ರಕ್ಷುಬ್ದಗೊಂಡು ಉಳ್ಳಾಲವೂ ಸೇರಿದಂತೆ ಪೇಟೆ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿತ್ತು.ಅದಾಗಲೇ ಧರ್ಮಾಂಧರು ಕೋಮುಗಲಭೆಗೆ ಅಡಿಪಾಯ ಹಾಕಿದ್ದರು.(ಟಿ.ಸಿ. ರೋಡಿನಲ್ಲಿ ನಿಲ್ಲಿಸಿದ್ದ ಹಿಂದೂವೊಬ್ಬನ ಕಾರಿಗೆ ಕಲ್ಲು ಬಿಸಾಡಿ ಹಾನಿಗೊಳಿಸಿದ್ದಾರೆಂಬ ಗುಲ್ಲೆಬ್ಬಿಸಿದ್ದರು. ಅದು ಸುಳ್ಳೆಂಬುದು ಸಾಬೀತಾಗಿತ್ತು. ಆದರೆ ಅಷ್ಟರಲ್ಲೇ ಒಬ್ಬ ಅಮಾಯಕ ಮುಸ್ಲಿಮ್ ಯುವಕನು ಏಟು ತಿಂದಿದ್ದನು.)

ಜನರಿಲ್ಲದೆ ತೊಕ್ಕೋಟು ಪೇಟೆ ಬಿಕೋ ಎನ್ನುತಿತ್ತು. ವೈದ್ಯರ ಡಿಸ್ಪೆನ್ಸರಿ ಮುಚ್ಚುವುದಾಗಲೀ ಅವರಲ್ಲಿಂದ ತೆರಳುವುದಾಗಲೀ ಕಷ್ಟ ಸಾಧ್ಯವೆನಿಸಿತು.
ಅಂದು ಇವರ ಅಣ್ಣ ಉಳ್ಳಾಲಕ್ಕೆ ಬಂದಿದ್ದವರು ಕೂಡಾ ಅಲ್ಲಿಯೇ ಬಾಕಿಯಾಗಿದ್ದರು.
..ಅಣ್ಣ ಅಲ್ಲಿ ತಾನು ಇಲ್ಲಿ.. ಮುಂದೇನು ಮಾಡುವುದೆಂದು ದಾರಿ ತೋಚದೆ ಕಂಗಾಲಾಗಿದ್ದರು. ಡಿಸ್ಪೆನ್ಸರಿಯ ಎದುರಿಗಿದ್ದ ಬೀಡಿ ಸಂಘದ ಕಛೇರಿಯಲ್ಲಿ ನಾನಿದ್ದೆ. ಹೊರಗಡೆ ಬಂದು ಇಣುಕಿದಾಗ ವೈದ್ಯರು ದಿಕ್ಕೆಟ್ಟವರಂತೆ ವರ್ತಿಸುತ್ತಿರುವುದನ್ನು ಕಂಡೆ. ಕೂಡಲೇ ಅವರ ಬಳಿ ಹೋಗಿ ಧೈರ್ಯ ಹೇಳಿದೆ.

ಉಳ್ಳಾಲದಲ್ಲಿ ಸಿಲುಕಿಕೊಂಡಿದ್ದ ಅಣ್ಣನನ್ನೂ ಕರಕೊಂಡು ನಂತರ ಮಂಗಳೂರು ಕಡೆಗೆ ಹೋಗಬೇಕಿತ್ತು. ಉಳ್ಳಾಲದಲ್ಲಿ ಹೇಳಿಕೇಳಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವುದರಿಂದ ಅವರ ಮಾನವೀಯ ಗುಣದ ಬಗ್ಗೆ ಅನುಮಾನಗೊಂಡಿದ್ದ ಈ ಇಬ್ಬರೂ ಅಣ್ಣ ತಮ್ಮಂದಿರು ಆತಂಕಗೊಂಡಿದ್ದರು.
ಅಣ್ಣನನ್ನು ಕರಕೊಂಡು ಬರಲು ವೈದ್ಯರ ಕಾರಿನಲ್ಲಿ ನಾನು ಹೋದೆನು. ನೂರಾರು ಮಂದಿ ಜಮಾಯಿಸಿದ್ದ ಮಾಸ್ತಿಕಟ್ಟೆ ಎಂಬಲ್ಲಿ ನಮ್ಮ ಕಾರನ್ನು ತಡೆದು ನಿಲ್ಲಿಸಿದರು. ಅವರಲ್ಲಿ ಬಹಳಷ್ಟು ಮಂದಿಗೆ ನಮ್ಮಿಬ್ಬರ ಪರಿಚಯವಿತ್ತು. ನಮಸ್ಕಾರ ಎಂದರು. ಅಲ್ಲಿಂದ ಮತ್ತೊಂದು ಕಿ. ಮೀ. ನಷ್ಟು ದೂರಕ್ಕೆ ನಾವು ಹೋಗಬೇಕಿತ್ತು. ಹೋಗುವ ದಾರಿಯಲ್ಲಿ ಪರಿಚಯ ವಿಲ್ಲದವರು ಯಾರಾದರು ತೊಂದರೆ ಕೊಡದಿರಲೆಂದು ಅವರಲ್ಲೊಬ್ಬ ನಮ್ಮ ಕಾರಿನಲ್ಲಿ ಜೊತೆಗೆ ಬಂದನು.

ನನಗಿದ್ದ ಧೈರ್ಯವೆಂದರೆ ಈ ಭಾಗದ ಮುಸ್ಲಿಮರು ಅಮಾಯಕರ ಮೇಲೆ ದಾಳಿ ಮಾಡಲಾರರು ಎಂಬ ನಂಬಿಕೆ ವಿಶ್ವಾಸ. ಇದು ಇಲ್ಲಿನ ನನ್ನ ಅನುಭವ. ಈ ವಿಚಾರವನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಿದಾಗ ವೈದ್ಯರ ಮಗನ ಮುಖದಲ್ಲಿ ಕ್ರತಜ್ಞತಾ ಭಾವದ ನಗುವೊಂದು ಅರಳಿತು.

ಲೇಖನ – ಬಾಬು ಪಿಲಾರ್.

Related Posts

Leave a Reply

Your email address will not be published.