ಡಿ.11ರ ಮನೆ ಕಳ್ಳತನ ಪ್ರಕರಣದ ಆರೋಪಿಯ ಬಂಧನ

ಉಡುಪಿ ತಾಲೂಕು ಶಿವಳ್ಳಿಯಲ್ಲಿ ಡಿ.11ರಂದು ನಡೆದಿದ್ದ ಮನೆ ಕಳ್ಳತನ ಪ್ರಕರಣದ ಆರೋಪಿಯನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಆಶ್ರಯ ಬಡಾವಣೆ ನಿವಾಸಿ ಸಾಧಿಕ್ ಉಲ್ಲಾ (35) ಬಂಧಿತ ಆರೋಪಿ. ಉಡುಪಿ‌ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಈತನನ್ನು‌ ಬಂಧಿಸಿದ್ದು ಶಿಕಾರಿಪುರದ ತನ್ನ ಮನೆಯಲ್ಲಿಟ್ಟಿದ್ದ ಕಳವು‌ಮಾಡಿಕೊಂಡು ಹೋದ 4 ಲಕ್ಷ 35 ಸಾವಿರ ಮೌಲ್ಯದ ವಜ್ರದ ಉಂಗುರ, ಚಿನ್ನಾಭರಣ, ಬೆಳ್ಳಿ ಗಟ್ಟಿ, ಬೆಳ್ಳಿ ಆಭರಣ ಮೊದಲಾದವುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.

ಘಟನೆ ವಿವರ: ಶಿವಳ್ಳಿ ಕುಂಜಿಬೆಟ್ಟು ನಿವಾಸಿಯಾದ 50 ವರ್ಷ ಪ್ರಾಯದ ಮಹಿಳೆಯೋರ್ವರ ಮನೆಯಲ್ಲಿ ಡಿ.12 ರಂದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ಮನೆಯ ಹಿಂಬದಿ ಬಾಗಿಲಿನ ಮೂಲಕ ಒಳಪ್ರವೇಶಿಸಿ ಅಲ್ಮೇರಾ ಬಾಗಿಲು ಮುರಿದು ಲಾಕರಿನಲ್ಲಿದ್ದ ಒಂದು ವಜ್ರದ ಉಂಗುರ, ಚಿನ್ನದ ಜುಮುಕಿಗಳು, ಚಿನ್ನದ ಕಾಯಿನ್, 2 ಬೆಳ್ಳಿ ತಟ್ಟೆ, ಚಿನ್ನದ ಲೇಪನವಿರುವ ಆಭರಣ ಕಳವು ಮಾಡಲಾಗಿತ್ತು. ಕಳವಾದ ಒಟ್ಟು ಸೊತ್ತುಗಳ ಒಟ್ಟು ಮೌಲ್ಯ ನಾಲ್ಕು ಲಕ್ಷಕ್ಕೂ ಅಧಿಕವಾಗಿದ್ದು ಮಹಿಳೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚ್ಚೀಂದ್ರ ಹಾಕೆ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ, ಉಡುಪಿ ಉಪವಿಭಾಗದ ಡಿವೈಎಸ್ಪಿ ಸುಧಾಕರ್ ಸದಾನಂದ ನಾಯ್ಕ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾಗಿ ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು ಪೊಲೀಸ್ ಉಪನಿರೀಕ್ಷಕರಾದ ಮಹೇಶ್ ಟಿ.ಎಂ, ವಾಸಪ್ಪ ನಾಯ್ಕ್, ಸಿಬ್ಬಂದಿಗಳಾದ ಸತೀಶ್ ಬೆಳ್ಳೆ, ಆನಂದ್ ಎಸ್., ರಿಯಾಝ್ ಅಹ್ಮದ್, ವಿಶ್ವನಾಥ್ ಶೆಟ್ಟಿ, ಕಿರಣ್ ಕೆ., ಶಿವಕುಮಾರ್, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ದಿನೇಶ್, ನಿತಿನ್ ಕುಮಾರ್ ಇದ್ದರು

Related Posts

Leave a Reply

Your email address will not be published.