ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ 2023-24ನೇ ಸಾಲಿನ ಪ್ರಶಸ್ತಿ ಪ್ರಕಟ
ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ನೀಡಲಾಗುವ 2023-24ನೇ ಸಾಲಿನ ‘ಮಾನವ ರತ್ನ’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಐಎಎಸ್ ಅಧಿಕಾರಿ ಹಾಗೂ ತಿರುವಳ್ಳೂರು ಸಂಸದ ಸಸಿಕಾಂತ ಸೆಂಥಿಲ್, ‘ಸೇವಾ ರತ್ನ’ ಪ್ರಶಸ್ತಿಗೆ ಉದ್ಯಮಿ ಕೆ.ಎಸ್. ನಿಸಾರ್ ಅಹ್ಮದ್ ಹಾಗೂ ‘ಸೌಹಾರ್ದ ರತ್ನ’ ಪ್ರಶಸ್ತಿಗೆ ಸಾಮಾಜಿಕ ಹೋರಾಟಗಾರ ವಿಲಿಯಮ್ ಮಾರ್ಟಿಸ್ ಅವರು ಆಯ್ಕೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇದ್ರಿಸ್ ಹೂಡೆ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 10ರಂದು ಸಂಜೆ 6.15 ಕ್ಕೆ ಉಡುಪಿಯ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಮ್ ನಲ್ಲಿ ನಡೆಯಲಿರುವ ‘ವಿವಿಧ ಸಮುದಾಯಗಳ ಸ್ನೇಹ ಸಮಾವೇಶ’ ಮತ್ತು ‘ಪ್ರಶಸ್ತಿ ಪ್ರಧಾನ ಸಮಾರಂಭ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಡಾ. ಗಣನಾಥ ಎಕ್ಕಾರ್, ಜಿಪಂ ಮಾಜಿ ಅಧ್ಯಕ್ಷೆ ಸರಸು ಡಿ. ಬಂಗೇರ, ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಸರಳಾ ಕಾಂಚನ್, ದಲಿತ ನಾಯಕ ಅಣ್ಣಪ್ಪ ನಕ್ರೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಹಾಗೂ ಹಸೈನಾರ್ ಕೊಡಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಾನಪದ ವಿದ್ವಾಂಸ, ಡಾ.ಪುರುಷೋತ್ತಮ ಬಿಳಿಮಲೆ ‘ಮುಖ್ಯ ಭಾಷಣ’ ಮಾಡಲಿದ್ದಾರೆ. ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಅಬ್ದುಲ್ಲಾ ಕುoಞ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸಿನ್ ಮಲ್ಪೆ ಅಭಿನಂದನಾ ಭಾಷಣ ಮಾಡಲಿದ್ದಾರೆ. ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಶರ್ಫುದ್ದೀನ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೌರವ ಅತಿಥಿಗಳಾಗಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಅಬ್ದುಲ್ಲಾ ಪರ್ಕಳ, ಕರ್ನಾಟಕ ಅಲೈಡ್ ಹೆಲ್ತ್ ಕೌನ್ಸಿಲ್ ಅಧ್ಯಕ್ಷರಾದ ಯು.ಟಿ.ಇಫ್ತಿಖಾರ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಉದ್ಯಮಿ ಆಫ್ರೋಜ್ ಅಸ್ಸಾದಿ ದುಬೈ, ಸಹಬಾಳ್ವೆಯ ಅಧ್ಯಕ್ಷ ಕೆ. ಫಣಿರಾಜ್, ಕರ್ನಾಟಕ ದಲಿತ ಸಂಘರ್ಷ ಸಮೀತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ತರ, ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಗ್ರೇಸಿ ಕೊಯಲೋ, ಕುಂದಾಪುರದ ಕೊಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಫಿರ್ದೌಸ್ ಉಪಸ್ಥಿತರಿರಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸಯ್ಯದ್ ಫರೀದ್, ಸಲಾವುದ್ದೀನ್ ಅಬ್ದುಲ್ಲಾ, ಇಕ್ಬಾಲ್ ಮನ್ನಾ, ಇಸ್ಮಾಯಿಲ್ ಕಟಪಾಡಿ, ಟಿ.ಎಮ್ ಜಫ್ರುಲ್ಲಾ, ಅಬ್ದುಲ್ ಅಝೀಜ್ ಉದ್ಯಾವರ ಉಪಸ್ಥಿತರಿದ್ದರು.