ಉಡುಪಿ : ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ವೇಳೆ ತಲೆಕೆಳಗಾಗಿ ಬಿದ್ದ ಕ್ರೈನ್
ನಾಲ್ಕಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ಗೊಂದಲದ ಗೂಡಾಗಿದೆ.
ಇಲ್ಲಿನ ಏಕಮುಖ ಸಂಚಾರದಿಂದ ಜನರು ರೋಸಿ ಹೋಗಿದ್ದಾರೆ. ಸಾಕಷ್ಟು ಹೋರಾಟಗಳ ಬಳಿಕ ಇದೀಗ ಸೇತುವೆ ಕಾಮಗಾರಿ ಆಮೆ ಗತಿಯಲ್ಲಿ ಶುರುವಾಗಿದೆ.
ಕಾಮಗಾರಿ ನಡೆಯುತ್ತಿರುವ ವೇಳೆ ಕ್ರೈನ್ ವೊಂದು ತಲೆಕೆಳಗಾಗಿ ಬಿದ್ದ ಘಟನೆ ನಡೆದಿದೆ. ಎಡಮಗ್ಗಲಿನ ಎತ್ತರದ ರಸ್ತೆಯಿಂದ ಬಲ ಮಗ್ಗುಲಿನಲ್ಲಿರುವ ತಗ್ಗು ರಸ್ತೆಗೆ, ಈ ಕ್ರೈನ್ ಬಿದ್ದಿದ್ದರೆ ಭಾರಿ ಅಪಾಯ ಸಂಭವಿಸುತ್ತಿತ್ತು. ಹತ್ತಾರು ವಾಹನಗಳು ಸಂಚರಿಸುವ ರಸ್ತೆಯ ಪಕ್ಕದಲ್ಲಿ ಕಂಡು ಬಂದ ಅಪಾಯಕಾರಿ ಸನ್ನಿವೇಶ ಜನರನ್ನು ಬೆಚ್ಚಿ ಬೀಳಿಸಿದೆ.
ತಲೆ ಕೆಳಗಾಗಿ ಬಿದ್ದ ಕ್ರೈನನ್ನು ಇದೀಗ ಬೃಹತ್ ಗಾತ್ರದ ಮತ್ತೊಂದು ಕ್ರೈನ್ ಮೂಲಕ ಎತ್ತಲಾಗಿದೆ. ಪ್ರತಿ ಬಾರಿ ಒಂದಿಲ್ಲೊಂದು ಅಪಾಯವನ್ನು ಆಹ್ವಾನಿಸುವ ಈ ಪ್ರದೇಶ ಕಾಮಗಾರಿ ಪೂರ್ಣಗೊಂಡು ಆದಷ್ಟು ಬೇಗ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿ ಎಂದು ಜನರು ಒತ್ತಾಯಿಸಿದ್ದಾರೆ.