ಉಜಿರೆಯಲ್ಲಿ ಎಸ್.ಡಿ.ಎಂ. ಮಲ್ಟಿಮೀಡಿಯಾ ವೀಡಿಯೊ ಕಾನ್ಫರೆನ್ಸ್ ವ್ಯವಸ್ಥೆಗೆ ಚಾಲನೆ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅತ್ಯಾಧುನಿಕ ಎಸ್.ಡಿ.ಎಂ. ಮಲ್ಟಿಮೀಡಿಯಾ ವಿಡಿಯೋ ಕಾನ್ಫರೆನ್ಸ್ ಕೊಠಡಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಪ್ರೊ. ಎಸ್. ಆರ್. ನಿರಂಜನ ಅವರು ಸೆ.28ರಂದು ಉದ್ಘಾಟಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಡಿ. ವೀರೇಂದ್ರ ಹೆಗ್ಗಡೆ ಅವರು ವೀಡಿಯೊ ಕಾನ್ಫರೆನ್ಸ್ ಲಿಂಕ್ ಕ್ಲಿಕ್ ಮಾಡುವ ಮೂಲಕ ಈ ಸೌಲಭ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಹೆಗ್ಗಡೆಯವರ ಮೊಮ್ಮಗಳಾದ ಮಾನ್ಯ ಅವರು ಬೆಂಗಳೂರಿನಿಂದ ವೀಡಿಯೊ ಮೂಲಕ ಶುಭಹಾರೈಸಿದರು.

ಈ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಫಿನಾನ್ಸ್ ಪ್ರಾಜೆಕ್ಟ್ ಡೈರೆಕ್ಟರ್ ನಿಶ್ಚಲ್ ಡಿ. ಹಾಗೂ ಬೆಂಗಳೂರಿನ ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರದ ಕಾರ್ಯವಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಹೆಗ್ಗಡೆಯವರು ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವೀಡಿಯೊ ಕಾನ್ಫರೆನ್ಸ್-ನಂತಹ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಮೂಲಕ ಸಂಸ್ಥೆ ಮತ್ತಷ್ಟು ಸಂಪನ್ಮೂಲ ವ್ಯಕ್ತಿಗಳನ್ನು ವಿದ್ಯಾರ್ಥಿಗಳಿಗೆ ಹತ್ತಿರವಾಗಿಸಿದೆ ಎಂದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಐಟಿ ಹಾಗೂ ವಸತಿ ನಿಲಯಗಳ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರನ್ ವರ್ಮ ಅವರು ಮಾತನಾಡಿ, “ಈ ಎಸ್.ಡಿ.ಎಂ. ಮಲ್ಟಿಮೀಡಿಯಾ ಸ್ಟುಡಿಯೋ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯ ಮೂಲಕ ಎಲ್ಲಾ ರೀತಿಯ ವೀಡಿಯೋ ಸಂಬಂಧಿತ ಕಾನ್ಫರೆನ್ಸ್ ಗಳನ್ನು ನಡೆಸಬಹುದಾಗಿದೆ. ಜೊತೆಗೆ ಈ ಕೇಂದ್ರ ಆನ್ಲೈನ್ ಮತ್ತು ಹೈಬ್ರೀಡ್ ಮೋಡ್ ಸೆಮಿನಾರ್ ಗಳು, ಲೈವ್ ಇ-ಲೆಕ್ಚರ್ ಗಳು, ಯೂಟ್ಯೂಬ್, ಫೇಸ್ ಬುಕ್ ಮೂಲಕ ನ್ಯೂಸ್ ಹಾಗೂ ಸಂದರ್ಶನದ ನೇರಪ್ರಸಾರಗಳನ್ನೂ ನಡೆಸುವ ಸೌಲಭ್ಯ ಹೊಂದಿದೆ. ಈ ಕಾನ್ಫರೆನ್ಸ್ ಕೊಠಡಿ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಸೌಂಡ್ ಪ್ರೂಫ್, ಎಕೋ ಪ್ರೂಫ್ ಸೌಲಭ್ಯ ಹೊಂದಿದೆ” ಎಂದು ವಿವರಿಸಿದರು.

ಸಮಾರಂಭದಲ್ಲಿ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಎನ್. ಉದಯಚಂದ್ರ, ಉಪ ಪ್ರಾಂಶುಪಾಲ ಡಾ. ಎ. ಜಯಕುಮಾರ ಶೆಟ್ಟಿ, ಸೂಪರಿಂಟೆಂಡೆಂಟ್ ಯುವರಾಜ ಪೂವಣಿ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ವಿಶ್ವನಾಥ್ ಪಿ., ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.