ullala ಲಾರಿ ಅಪಘಾತಕ್ಕೀಡಾಗಿ ಪಾದಚಾರಿ ಸಾವು

ಉಳ್ಳಾಲ: ಲಾರಿ ಅಪಘಾತಕ್ಕೀಡಾಗಿ ಪಾದಚಾರಿ ಮುಳ್ಳೇರಿಯ ಆದೂರು ನಿವಾಸಿ ವಸಂತ್ ಕುಮಾರ್ ರೈ (55) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಟೋಲ್ ಗೇಟ್ ಸಮೀಪ ಸೋಮವಾರ ಸಂಜೆ ಸಂಭವಿಸಿದೆ.
ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರನ್ನು ದಾಟುವ ಸಂದರ್ಭ ಕೇರಳದ ಕಡೆಯಿಂದ ಅತಿವೇಗದಿಂದ ಧಾವಿಸುತ್ತಿದ್ದ ಕಲ್ಲು ಲೋಡ್ ಇದ್ದ ಲಾರಿ ವಸಂತ್ ಅವರಿಗೆ ಢಿಕ್ಕಿ ಹೊಡೆದಿದೆ.ತಲೆಗೆ ಗಂಭೀರ ಗಾಯಗೊಂಡ ಅವರನ್ನು ಟೋಲ್ ಸಿಬ್ಬಂದಿ ಸೇರಿ, ತಮ್ಮದೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಮಂಗಳೂರು ಸಂಚಾರಿ ಠಾಣಾ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಎಲ್ಲರೂ ಶಾಲೆ ಕಲಿಯುವ ವಿದ್ಯಾರ್ಥಿಗಳಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಸಂತ್ ಕುಮಾರ್ ರೈ ಅಪಘಾತದಲ್ಲಿ ಸಾವನ್ನಪ್ಪುವ ಮೂಲಕ ಎರಡು ತಿಂಗಳ ಅಂತರದಲ್ಲಿ ಸಾವು ಕಂಡ ಮೂರನೇ ವ್ಯಕ್ತಿಯಾಗಿದ್ದಾರೆ. ಮುಂಬೈನಲ್ಲಿದ್ದ ಸಹೋದರ ಸದಾನಂದ ರೈ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಅವರ ಮಕ್ಕಳು ಸೋಮವಾರ ರಾತ್ರಿ ರೈಲಿನಲ್ಲಿ ವಾಪಸ್ಸು ಮುಂಬೈಗೆ ಪ್ರಯಾಣಿಸುವ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗುವ ಸಲುವಾಗಿ ವಸಂತ್ ರೈ ಕೋಟೆಕಾರಿಗೆ ತೆರಳುತ್ತಿದ್ದರು. ಇನ್ನೋರ್ವ ಸಹೋದರ ಚಂದ್ರಹಾಸ್ ರೈ 15 ದಿನಗಳ ಅಂತರದಲ್ಲಿ ಅದೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಇದೀಗ ಅವರ ಸಾವಿನ 17 ದಿನಗಳ ಅಂತರದಲ್ಲಿ ವಸಂತ್ ಕುಮಾರ್ ರೈ ಸಾವನ್ನಪ್ಪಿದ್ದಾರೆ. ತಿಂಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರ ಸಾವಿನಿಂದ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
