ಉಳ್ಳಾಲ: ಪೆಟ್ರೋಲ್ ಸ್ಕೂಟರ್ ಬೆಂಕಿಗಾಹುತಿ
ಉಳ್ಳಾಲ: ಮನೆ ಅಂಗಳದಲ್ಲಿ ನಿಲ್ಲಿಸಿಡಲಾಗಿದ್ದ ಪೆಟ್ರೋಲ್ ಸ್ಕೂಟರ್ ಬೆಂಕಿಗೆ ಆಹುತಿಯಾದ ಘಟನೆ ಕುಂಪಲ ಸಮೀಪದ ವಿದ್ಯಾನಗರ ಎಂಬಲ್ಲಿ ತಡರಾತ್ರಿ ಸಂಭವಿಸಿದೆ.
ಐಟಿಐ ವಿದ್ಯಾರ್ಥಿ ರಾಕೇಶ್ ಎಂಬವರಿಗೆ ಸೇರಿದ ಸ್ಕೂಟರ್ ಬೆಂಕಿಗೆ ಆಹುತಿಯಾಗಿದೆ. ಎರಡು ತಿಂಗಳ ಹಿಂದಷ್ಟೇ ಟಿವಿಎಸ್ ಎಂಟಾರ್ಕ್ ಸ್ಕೂಟರನ್ನು ರಾಕೇಶ್ ಖರೀದಿಸಿದ್ದು, ಮೊದಲ ತಿಂಗಳ ಸಾಲದ ಕಂತನ್ನು ಕಟ್ಟಿದ್ದರು. ತಡರಾತ್ರಿ 12.30ರ ಸುಮಾರಿಗೆ ಇದ್ದಕ್ಕಿಂತೆ ಸ್ಕೂಟರ್ ಗೆ ಬೆಂಕಿ ಆವರಿಸಿ, ಬೆಂಕಿಯ ಕೆನ್ನಾಲೆ ಮನೆಯ ಕಿಟಕಿ, ತಾರಸಿಗೂ ತಗಲಿದೆ. ಮನೆಮಂದಿ ಎಚ್ಚೆತ್ತು ತಕ್ಷಣವೇ ಬೆಂಕಿ ನಂದಿಸಲು ಮುಂದಾಗಿದ್ದರಿಂದಾಗಿ ಸಂಭಾವ್ಯ ಅನಾಹುತ ತಪ್ಪಿದೆ. ಬೆಂಕಿಯಿಂದಾಗಿ ಮನೆಗೂ ಹಾನಿಯಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶಾರ್ಟ್ ಸರ್ಕ್ಯುಟ್ ನಿಂದ ಘಟನೆ ಸಂಭವಿಸಿರುವ ಶಂಕೆಯಿದೆ.