ಬಿ. ಜನಾರ್ದನ ಪೂಜಾರಿಯನ್ನು ಭೇಟಿಯಾದ ಯು.ಟಿ. ಖಾದರ್

ಬಂಟ್ವಾಳ: ಮಂಗಳೂರು ಶಾಸಕ ಯು.ಟಿ. ಖಾದರ್ ಅವರು ಬುಧವಾರ ಸಂಜೆ ಬಂಟ್ವಾಳದಲ್ಲಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಜನಾರ್ದನ ಪೂಜಾರಿಯವರು ನಮ್ಮ ಪಕ್ಷದ ಹಿರಿಯ ನಾಯಕರು. ತನ್ನ ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಿ. ಜನಾರ್ದನ ಪೂಜಾರಿಯವರು ಮಾರ್ಗದರ್ಶನ ಮಾಡಿದ್ದರು.

ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸಾಮಾಜಿಕ ಬದ್ದತೆ ನನ್ನ ರಾಜಕೀಯ ಜೀವನದಲ್ಲಿ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ ಎಂದರು. ನಾಮಪತ್ರ ಸಲ್ಲಿಸುವ ಮೊದಲು ಅವರ ಆಶೀರ್ವಾದ ಪಡೆದುಕೊಂಡಿದ್ದೆ ಇದೀಗ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕವೂ ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಕಾಂಗ್ರೆಸ್‍ನ ಎಲ್ಲಾ ಕಾರ್ಯಕರ್ತರನ್ನು ಒಂದು ಕುಟುಂಬದ ರೀತಿಯಲ್ಲಿ ನೋಡಿಕೊಂಡು ಸರ್ವರನ್ನು ಜೊತೆಯಾಗಿ ಕರೆದೊಯ್ಯುವಂತೆ ಅವರು ಸಲಹೆ ನೀಡಿದ್ದು ಅದನ್ನು ಸ್ವೀಕರಿಸಿ ಪಕ್ಷವನ್ನು ಬಲಿಷ್ಠಗೊಳಿಸಿ, ಪಕ್ಷ ಕಾರ್ಯಕ್ರಮವನ್ನು ಜನರಿಗೆ ಮುಟ್ಟಿಸಿ ಸೌಹಾರ್ದ, ಸಾಮರಸ್ಯ, ಅಭಿವೃದ್ಧಿಯ ಸಮಾಜ ನಿರ್ಮಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಪಕ್ಷದ ಪ್ರಮುಖರಾದ ಮಮತಾ ಡಿ.ಎಸ್. ಗಟ್ಟಿ, ಚಂದ್ರಹಾಸ ಕರ್ಕೇರಾ, ಸಂತೋಷ್ ಶೆಟ್ಟಿ, ಈಶ್ವರ ಉಳ್ಳಾಲ್, ಹಾಸಿರ್ ಪೇರಿಮಾರ್, ಅಬ್ದುಲ್ ರಝಾಕ್ ಕುಕ್ಕಾಜೆ, ಹುಸೈನ್ ಕುಂಞಮೋನ್, ಮಲ್ಲಿಕ್ಕಾ ಪಕ್ಕಳ, ಅರುಣ್ ಡಿಸೋಜಾ, ದೇವದಾಸ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.