ಮಂಗಳೂರು ರಥಬೀದಿ ಶ್ರೀ ಶಾರದಾ ಮಹೋತ್ಸವ: ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ
ನಗರದ ರಥಬೀದಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಶತಮಾನೋತ್ಸವದ ಪರ್ವ ಕಾಲದಲ್ಲಿ ಇಂದು (ಸೆ.26) ಶ್ರೀ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ದಿವ್ಯ ಹಸ್ತದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಿತು. ಈ ಪುಣ್ಯಪ್ರದ ಸಂದರ್ಭದಲ್ಲಿ ಶ್ರೀ ಶಾರದಾ ಮಾತೆಗೆ ಸ್ವರ್ಣ ನವಿಲು, ಸ್ವರ್ಣ ವೀಣೆ, ಸ್ವರ್ಣ ಕೈಬಳೆ ಅಲ್ಲದೇ ಇತರ ಸ್ವರ್ಣಾಭರಣಗಳೊಂದಿಗೆ ಸರ್ವಾಲಂಕಾರಭೂಷಿತಳಾದ ಶ್ರೀ ಮಾತೆಗೆ ಆರತಿಯನ್ನು ಬೆಳಗಲಾಯಿತು.
ಈ ಪ್ರತಿಷ್ಠಾಪನೆಯಲ್ಲಿ ಪ್ರಧಾನ ಅರ್ಚಕ ಜೆ. ಭಾಸ್ಕರ ಭಟ್, ವೈದಿಕರಾದ ಪಂಡಿತ ಎಂ. ನರಸಿಂಹ ಆಚಾರ್ಯ, ಪಂಡಿತ ಕಾಶೀನಾಥ ಆಚಾರ್ಯ, ವೇದಮೂರ್ತಿ ವೈಕುಂಠ ಭಟ್, ಸಮಿತಿಯ ಅಧ್ಯಕ್ಷ ಡಾ. ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಕೋಶಾಧಿಕಾರಿ ವಿಠಲ ಆಚಾರ್ಯ, ಅಲಂಕಾರ ತಂಡದ ರಘುರಾಮ ಕಾಮತ್, ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.ಈ ಬಾರಿ ಶತಮನೋತ್ಸವದ ಸಂಭ್ರಮದಲ್ಲಿರುವ ಶ್ರೀ ಶಾರದಾ ಮಹೋತ್ಸವದಂದು ಪ್ರತಿ ದಿನ ಸರ್ವಸಜ್ಜಿತಗೊಂಡ ಸರಸ್ವತಿ ಕಲಾ ಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು. ಸೆ. 27ರಂದು ಮಂಗಳವಾರ ಸಹಸ್ರ ಚಂಡಿಕಾ ಯಾಗವು ಆರಂಭಗೊಳ್ಳಲಿದ್ದು, ಅ.2 ರಂದು ಬೆಳಿಗ್ಗೆ ಶ್ರೀ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಮಹಾ ಪೂರ್ಣಾಹುತಿ ನೆರವೇರಲಿದ್ದು ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.