ಎರ್ಮಾಳು ಮೂಡಬೆಟ್ಟು ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆ: ಭಯಭೀತರಾದ ಜನತೆ

ಎರ್ಮಾಳಿನ ಮೂಡಬೆಟ್ಟು ಪ್ರದೇಶದಲ್ಲಿ ರಾತ್ರಿ ಸಮಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರು ಚಿರತೆಯನ್ನು ಕಂಡು ಭಯಭೀತರಾದ್ದು, ರಾತ್ರಿ ಎಲ್ಲಾ ಜಾಗರಣೆಯಿಂದ ಕೂರುವಂತಾಗಿದೆ.

ಎರ್ಮಾಳು ಅದಮಾರು ರಸ್ತೆಯ ಮೂಡಬೆಟ್ಟು ಎಂಬಲ್ಲಿ ಅಟೋ ರಿಕ್ಷಾದಲ್ಲಿ ಹೋಗುತ್ತಿದ್ದವರಿಗೆ ಈ ಚಿರತೆ ವಿದ್ಯುತ್ ದೀಪದಡಿಯಲ್ಲಿ ನಡೆದು ಹೋಗುತ್ತಿದ್ದ ದೃಶ್ಯ ಕಂಡುಬಂದಿದೆ. ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಎಲ್ಲರೂ ಒಟ್ಟಾಗಿ ಟಾರ್ಚ್ ಸಹಿತ ದೊಣ್ಣೆ ಹಿಡಿದು ಚಿರತೆಗಾಗಿ ಹುಡುಕಾಟ ಆರಂಭಿಸಿದ್ದು, ಈ ಮಧ್ಯೆ ಪೊಲೀಸ್ ಸಹಿತ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದ್ದು, ಪೊಲೀಸರು ಬಂದು ಹೋದರಾದರೂ, ಅರಣ್ಯ ಇಲಾಖಾ ಅಧಿಕಾರಿಗಳು ನಾಳೆ ಬರುತ್ತೇವೆ ಎಂದಿದ್ದಾರೆ.

ಇತ್ತ ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಬಹುದು ಎಂಬ ಹೆದರಿಕೆಯಿಂದ ರಾತ್ರಿ ಎಲ್ಲಾ ಜಾಗರಣೆ ಕಾಯುವಂತ್ತಾಯಿತು. ಕೃಷಿ ಸಹಿತ ಹೈನುಗಾರಿಕೆ ಮಾಡಿ ಜೀವನ ನಡೆಸುವ ಈ ಭಾಗದ ಮಂದಿ ದನಗಳನ್ನು ಹೊರಗೆ ಬಿಡಲು ಹೆದರುತ್ತಿದ್ದಾರೆ. ಸುತ್ತಲೂ ದಟ್ಟ ಪೊದೆಗಳಿರುವ ಶಾಲಾ ಮಕ್ಕಳು ಸಹಿತ ಸಾರ್ವಜನಿಕರು ಅಡ್ಡಾಡುವ ಈ ಪ್ರದೇಶದಲ್ಲಿ ಚಿರತೆ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನುತ್ತಾರೆ ಬರ್ಪಣಿ ಸಂತೋಷ್ ಶೆಟ್ಟಿ.

ಆತಂಕ ಬೇಡ:

ಮರುದಿನ ಘಟನಾ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಭಯ ಪಡುವ ಅಗತ್ಯ ಇಲ್ಲ ಎನ್ನುತ್ತಾರೆ. ಚಿರತೆ ಮನುಷ್ಯರ ಮೇಲೆ ದಾಳಿ ನಡೆಸುವುದಿಲ್ಲವಂತೆ.. ಸಂಜೆ ಆದ ಬಳಿಕ ಮಕ್ಕಳನ್ನು ಹೊರಗೆ ಬಿಡಬೇಡಿ, ಚಿರತೆ ಇವತ್ತು ಕೂಡಾ ಕಾಣ ಸಿಕ್ಕಿದರೆ ನಾಳೆ ಪಂಜರ ಇಟ್ಟು ಅದನ್ನು ಬಂಧಿಸುವ ಪ್ರಯತ್ನ ನಡೆಸಲಿದ್ದೇವೆ ಎನ್ನುವ ಮೂಲಕ ತಮ್ಮ ಜವಾಬ್ದಾರಿಯಿಂದ ಜಾರಿಕೊಂಡಿದ್ದರೂ ಈ ಭಾಗದ ಜನ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಬದುಕ ಬೇಕಾಗಿದೆ.

Related Posts

Leave a Reply

Your email address will not be published.