ಕೆಲ್ಲಪುತ್ತಿಗೆ ಭೂತರಾಜ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

ಮೂಡುಬಿದಿರೆ: ದರೆಗುಡ್ಡೆ ಗ್ರಾಮದ ಕೆಲ್ಲಪುತ್ತಿಗೆ ಪುರಾತನ ಶ್ರೀ ಭೂತರಾಜ ಕ್ಷೇತ್ರದಲ್ಲಿ ಭೂತರಾಜ, ಬ್ರಹ್ಮದೇವರು ಧರ್ಮರಸು, ಕಕ್ಕಿನಂತಾಯ, ಕೊಡಮಣಿತ್ತಾಯ ಬ್ರಹ್ಮಬೈದರ್ಕಳ, ಮಾಯಂದಾಲೆ ಸಾನಿಧ್ಯ ದೇವತೆಗಳ ಗುಡಿಗಳನ್ನು ಜೀರ್ಣೋದ್ಧಾರಗೊಳಿಸಿದ್ದು, ಪುನರ್ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ರಂಗಪೂಜಾ ನೇಮೋತ್ಸವವು ಮಂಗಳವಾರ ನಡೆಯಿತು. ಬೆಳಿಗ್ಗೆ ಕೆಲ್ಲಪುತ್ತಿಗೆ ಪರಾಡಿಗುತ್ತಿನಿಂದ ಭೂತರಾಜ ಕ್ಷೇತ್ರಕ್ಕೆ ಸಕಾಲ ಬಿರುದಾವಳಿಗಳೊಂದಿಗೆ ದೈವಗಳ ಭಂಡಾರದ ಆಗಮನವಾಗಿದ್ದು, ಬಳಿಕ ಧಾರ್ಮಿಕ ವಿಧಿವಿಧಾನಗಳು, ಪುನರ್ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕ ನಡೆಯಿತು.

ರಾತ್ರಿ ಧರ್ಮರಸು ದೈವ, ಕುಕ್ಕಿನಂತಾಯ, ಕೊಡಮಣಿತ್ತಾಯ ದೈವಗಳು, ಬ್ರಹ್ಮಬೈದರ್ಕಳ ಮತ್ತು ಮಾಯಾಂದಾಲೆ ನೇಮ ನಡೆಯಿತು. ಬುಧವಾರ ಬೆಳಿಗ್ಗೆ ಕುಕ್ಕಿನಂತಾಯ ದೈವದ ಓಕುಳಿ ನೇಮ ನಡೆಯಿತು. ಕ್ಷೇತ್ರದ ಆನುವಂಶಿಯ ಆಡಳಿತ ಮೊಕ್ತೇಸರರಾದ ಕೆ.ಪಿ ಜಗದೀಶ್ ಅಧಿಕಾರಿ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಭಾಗವಹಿಸಿ ಆಶೀರ್ವಚನ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಟಿ ಸುವರ್ಣ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮುಂಬೈ ಉದ್ಯಮಿ ಹುರ್ಲಾಡಿ ರಘುವೀರ್ ಶೆಟ್ಟಿ, ಬಂಟ ಸಮಾಜದ ಪ್ರಮುಖರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಿದರು. ಪಣಪಿಲ ಅರಮನೆಯ ಬಿ. ವಿಮಲ್ ಕುಮಾರ್, ಕೊನ್ನಾರ ಮಾಗಣೆಯ ಕೆ.ನರಸಿಂಹ ತಂತ್ರಿ, ದೊಲ್ದೊಟ್ಟುಗುತ್ತು ಕೆ.ವಜ್ರನಾಭ ಹೆಗ್ಡೆ, ಕರಿಯಾಲ್‌ಗುತ್ತು ಚಂದ್ರಕಾoತ ಜೈನ್, ದರೆಗುಡ್ಡೆಗುತ್ತು ಸುಭಾಸ್ ಜೈನ್, ಕೆಳಗಿನ ಬರ್ಕೆ ನವೀನ್ ಪೂಜಾರಿ, ಏದಬೆಟ್ಟು ಬರ್ಕೆ ಗುಮ್ಮಣ್ಣ ಪೂಜಾರಿ, ಮೇಗಿನ ಬರ್ಕೆ ಸಂಜೀವ ಪೂಜಾರಿ, ಜಗಿದೊಟ್ಟು ಬರ್ಕೆ ಶುಭಕರ ಕೋಟ್ಯಾನ್ ಹಾಗೂ ಪ್ರಮುಖರಾದ ಪ್ರಭಾಕರ ಆಚಾರ್ಯ ಕೆಲ್ಲಪುತ್ತಿಗೆ, ಸಚೀಂದ್ರ ಅಮೀನ್ ಮತ್ಲ್ಮಾರು, ಅಶೋಕ್ ಶೆಟ್ಟಿ ಬೇಲೋಟ್ಟು ಕೆಲ್ಲ ಮನೆತನದ ಕುಟುಂಬಸ್ಥರು ಉಪಸ್ಥಿತರಿದ್ದರು
