ತೌಕ್ತೆ ಚಂಡಮಾರುತದ ಹಾನಿ ಸಮೀಕ್ಷೆಗೆ ಕೇಂದ್ರದ ತಂಡ ಭೇಟಿ ನೀಡಲಿದೆ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಮತ್ತು ತೌಕ್ತೆ ಚಂಡಮಾರುತದ ಹಾನಿ ಸಮೀಕ್ಷೆ ನಡೆಸಲು ಕೇಂದ್ರದ ತಂಡ ಜಿಲ್ಲೆಗೆ ಭೇಟಿ ನೀಡಲಿದೆ ಎಂಬ ಮಾಹಿತಿ ದೊರಕಿದೆ. ದ.ಕ. ಜಿಲ್ಲಾಧಿಕಾರಿಯವರು ಈಗಾಗಲೇ ಸುಮಾರು ರೂ. 80 ಕೋಟಿ ಹಾನಿಯ ಪರಿಹಾರದ ವರದಿಯನ್ನು ಸಿದ್ಧಪಡಿಸಿದ್ದಾರೆ. ಇದಲ್ಲದೆ, ತೌಕ್ತೆ ಚಂಡಮಾರುತದಿಂದ ಮನೆ ಹಾನಿ, ಲೋಕೋಪಯೋಗಿ ಇಲಾಖೆಯ ರಸ್ತೆ ಹಾನಿ, ಕಡಲ್ಕೊರೆತ ಮತ್ತಿತರ ಹಾನಿಗಳ ಕುರಿತು ಪರಿಹಾರಕ್ಕಾಗಿ ರೂ. 125 ಕೋಟಿ ನಷ್ಟ ಅಂದಾಜಿಸಲಾಗಿದೆ. ಎಂದು ರಾಜ್ಯದ ಬಂದರು ಮತ್ತು ಮೀನುಗಾರಿಕಾ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು ಅವರು ಶುಕ್ರವಾರ ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಾಮಾನ್ಯವಾಗಿ ಲಾಕ್ಡೌನ್ ವಿಸ್ತರಿಸಬೇಕೆಂಬ ಇರಾದೆ ಯಾರಿಗೂ ಇಲ್ಲ. ಆದರೆ, ಕೊರೋನಾ ಸರಪಳಿಯನ್ನು ತುಂಡರಿಸಬೇಕೆಂಬ ಉದ್ದೇಶದಿಂದ ಅನಿವಾರ್ಯವಾಗಿ ಲಾಕ್ಡೌನ್ ವಿಸ್ತರಿಸಲಾಗಿದೆ. ಕೊರೋನಾ ಮಹಾಮಾರಿಯ ಈ ಸಂಕಷ್ಟ ಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗರಿಷ್ಠ ಪ್ರಮಾಣದಲ್ಲಿ ಪರಿಹಾರದ ಪ್ಯಾಕೇಜನ್ನು ಪ್ರಕಟಿಸಿದ್ದಾರೆ. ಈ ಆರ್ಥಿಕ ಸಂಕಷ್ಟದ ಕಾಲದಲ್ಲಿ ಮುಖ್ಯಮಂತ್ರಿಯವರು ಎರಡೆರಡು ಬಾರಿ ಬಡವರ್ಗದವರನ್ನು ವಿಶೇಷವಾಗಿ ಗುರುತಿಸಿ ಪ್ಯಾಕೇಜನ್ನು ಘೋಷಿಸಿದ್ದಾರೆ. ಇದು ಅಭಿನಂದನೀಯ ಎಂದರು.
ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬ ಇರಾದೆಯಿದೆ. ಈ ನಿಟ್ಟಿನಲ್ಲಿ ಪ್ರತೀ ಪಂಚಾಯತ್, ಪುರಸಭೆ, ನಗರಸಭೆಗಳ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಕ್ರಮಗಳನ್ನು ಕೈಗೊಂಡು ಕೊರೋನಾ ಶೂನ್ಯ ಮಟ್ಟಕ್ಕೆ ತಲುಪಬೇಕೆಂಬ ಹಠದೊಂದಿದೆ ಅಹರ್ನಿಶಿ ಕಾರ್ಯ ನಿರ್ವಹಿಸಲಾಗುತ್ತಿದೆ. ಇದಕ್ಕೆ ಜಿಲ್ಲೆಯ ಎಲ್ಲಾ ಶಾಸಕರ ಅವಿರತ ಪರಿಶ್ರಮ, ಪ್ರತೀ ಗ್ರಾಮ, ನಗರಸಭೆ ಮಟ್ಟದಲ್ಲಿ ಕಾರ್ಯಪಡೆಗಳ ರಚನೆಯ ಮೂಲಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ಕೊರೋನಾ ಗಣನೀಯವಾಗಿ ಇಳಿಕೆ ಕಂಡಿದೆ.