ಆಳ್ವಾಸ್‌ನಲ್ಲಿ ಗಣರಾಜೋತ್ಸವ ಸಂಭ್ರಮ, ತ್ರಿವರ್ಣದಲ್ಲಿ ಮೂಡಿದ `ಇಂಡಿಯಾ’

ಮೂಡುಬಿದಿರೆ: 74ನೇ ಗಣರಾಜ್ಯೊತ್ಸವ ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್.ವಿನಯ ಹೆಗ್ಡೆ ಧ್ವಜಾರೋಹಣಗೈದರು. ನಂತರ ಮಾತನಾಡಿದ ಅವರು ನಮ್ಮ ದೇಶದಲ್ಲಿ ಹಲವು ತಿದ್ದುಪಡಿಗಳು ಶಾಸಕಾಂಗದ ಸರಳ ಬಹುಮತದಲ್ಲಿ ಅಂಗೀಕೃತಗೊಳ್ಳುತ್ತಿವೆ. ಆ ತಿದ್ದುಪಡಿಗಳೂ ರಾಜಕೀಯ ಪಕ್ಷಗಳ ಉದ್ದೇಶ ಈಡೇರಿಕೆಗಾಗಿ ನಡೆಯುತ್ತಿವೆ. ಹೀಗಾಗಿ, ಅತ್ಯುತ್ತಮ ಸಂವಿಧಾನವೊಂದಕ್ಕೆ ಪದೇ ಪದೇ ತಿದ್ದುಪಡಿ ಬೇಕಾಗಿದೆ. ಸಂವಿಧಾನದ ಮರುನೋಟ ಇಂದಿನ ಅಗತ್ಯ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ ಆಳ್ವ ಉದ್ಯಮಿ ಶ್ರೀಪತಿ ಭಟ್, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, 110ಕ್ಕೂ ಅಧಿಕ ಮಾಜಿ ಸೈನಿಕರು, ವಿವಿಧ ಜಿಲ್ಲೆಗಳ ಆಯುಕ್ತರು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಹಾಗೂ ಉಪನ್ಯಾಸಕ ರಾಜೇಶ್ ಡಿಸೋಜ ಕರ‍್ಯಕ್ರಮ ನಿರೂಪಿಸಿದರು.

ತ್ರಿವರ್ಣದಲ್ಲಿ ಇಂಡಿಯಾ': ಪುತ್ತಿಗೆಪದವಿನ ವಿಶಾಲವಾದ ಬಯಲು ರಂಗ ಮಂದಿರದ ಎದುರು ಸಹಸ್ರಾರು ಮಂದಿ ವಿದ್ಯಾರ್ಥಿಗಳ ಮಧ್ಯೆ ತ್ರಿವರ್ಣದಲ್ಲಿ
ಇಂಡಿಯಾ’ ಬರುವ ರೀತಿಯಲ್ಲಿ ವಿದ್ಯಾರ್ಥಿಗಳು ನಿಂತಿರುವುದು ಆಕರ್ಷಕವಾಗಿತ್ತು. ತಿರಂಗ ಬಣ್ಣದಿಂದ 450 ವಿದ್ಯಾರ್ಥಿಗಳು ದೇಶದ ಸಾರ್ವಭೌಮತ್ವವನ್ನು ಪ್ರತಿನಿಧಿಸುತ್ತಿದ್ದರೆ, 4,003 ವಿದ್ಯಾರ್ಥಿಗಳು ತಿರಂಗದಲ್ಲಿ ಇಂಡಿಯಾ' ರಚಿಸಿ ವಿವಿಧತೆಯಲ್ಲಿ ಏಕತೆಯ ಸಂದೇಶ ರವಾನಿಸಿದರು. ದೇಶಪ್ರೇಮವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿತು. ಪುಟಾಣಿಗಳಿಂದ ಹಿಡಿದು ಗಣ್ಯರ ಕೈಯಲ್ಲಿ ಹಾರಾಡಿದ ಧ್ವಜ, ಬ್ಯಾಂಡ್ ಸೆಟ್‌ನಲ್ಲಿ ಮೊಳಗಿದ ಸಂಗೀತ, ವಿದ್ಯಾರ್ಥಿಗಳ ಗಾಯನದಲ್ಲಿ ದೇಶಪ್ರೇಮವು ಮೇಳೈಸಿತ್ತು.
ವಂದೇ ಮಾತರಂ’ ಬಳಿಕ `ಕೋಟಿ ಕಂಠ’ ಹಾಡಿನ ನಿನಾದವನ್ನು ಸೇರಿದ್ದ ವಿದ್ಯಾರ್ಥಿಗಳು ಹಾಗೂ ಗಣ್ಯರ ಸಹಸ್ರಾರು ತ್ರಿವರ್ಣ ಧ್ವಜಗಳ ಅಲೆ ರಂಗೇರಿಸಿತು.
25,000 ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
