ಬಂಟ್ವಾಳ : ಕಾರ್ಮಿಕರ ಕೊರತೆಯ ನಡುವೆಯೂ ಗದ್ದೆಯಲ್ಲಿ ನೇಜಿ ನಾಟಿ

ಬಂಟ್ವಾಳ : ಕಾರ್ಮಿಕರ ಕೊರತೆಯ ನಡುವೆಯೂ ಗದ್ದೆಯಲ್ಲಿ ನೇಜಿ ನಾಟಿಯಲ್ಲಿ ತೊಡಗಿಸಿಕೊಂಡಿರುವ ಮೂವತ್ತು ಮಂದಿ ಕಾರ್ಮಿಕರು… ಸೊಂಟ ಬಗ್ಗಿಸಿ ನೇಜಿ ನಾಟಿಗೆ ನಿಂತರೆ ಎರಡು ಗಂಟೆಯಲ್ಲಿ ಮೂರುವರೆ ಎಕರೆ ವಿಸೀರ್ಣದ ಕಂಬಳ ಗದ್ದೆಯಲ್ಲಿ ನಾಟಿ ಕಾರ್ಯ ಪೂರ್ಣ! ಕೃಷಿ ಯಂತ್ರಕ್ಕೂ ಸೆಡ್ಡು ಹೊಡೆಯುವ ರೀತಿಯಲ್ಲಿ ಕೃಷಿ ಕಾರ್ಯದಲ್ಲಿ ನಿರತರಾಗಿರುವ ಈ ಕೃಷಿ ಕಾರ್ಮಿಕರು ಕೊಪ್ಪಳ ಜಿಲೆಯ ಗಂಗಾವತಿ ತಾಲೂಕಿನವರು!

ಭತ್ತದ ಬೇಸಾಯವೇ ಪ್ರಧಾನವಾಗಿದ್ದ ತುಳುನಾಡಿನಲ್ಲಿ ಕೃಷಿ ಕಾರ್ಮಿಕರ ಸಮಸ್ಯೆಯಿಂದಾಗಿ ಪ್ರಸ್ತುತ ಭತ್ತದ ಬೇಸಾಯ ದೂರವಾಗಿ ಸಾವಿರಾರು ಹೆಕ್ಟೇರ್ ಗದ್ದೆಗಳು ಹಡೀಲು ಬೀಳುತ್ತಿವೆ. ಲಾಭಕ್ಕಲ್ಲದಿದ್ದರೂ ಕೂಡ ಭತ್ತದ ಸಾಗುವಳಿ ಮಾಡಬೇಕು ಎನ್ನುವ ಹಠಕ್ಕೆ ಬಿದ್ದಿರುವ ಬೆರಳೆಣಿಕೆಯ ರೈತರು ಕಷ್ಟ ನಷ್ಟಗಳನ್ನು ಅನುಭವಿಸಿಕೊಂಡು ಬೇಸಾಯ ಮಾಡುತ್ತಿದ್ದಾರೆ. ಕಾರ್ಮಿಕರ ಕೊರತೆ ಎದುರಿಸುತ್ತಿರುವ ನಮ್ಮೂರಿನ ರೈತರಿಗೆ ಗಂಗಾವತಿಯ ಕೃಷಿ ಕಾರ್ಮಿಕರು ವರದಾನವಾಗಿದ್ದಾರೆ.

ಮುತ್ತೂರು ಬಳಿಯ ಕುಳವೂರುಗುತ್ತು ಸದಾನಂದ ಶೆಟ್ಟಿಯವರ ಕಂಬಳ ಗದ್ದೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನೋಣಲುಗುತ್ತು ಪ್ರತಿಭಾ ಹೆಗ್ಡೆಯವರು ಸಾಗುವಳಿ ಮಾಡುತ್ತಿದ್ದಾರೆ. ಗಂಗಾವತಿಯ 30 ಮಂದಿ ಕಾರ್ಮಿಕರ ಮೂಲಕ ನೇಜಿ ನಾಟಿ ಮಾಡಿಸಲಾಗಿದೆ. ಸೋಮವಾರ ಬೆಳಿಗ್ಗೆ 6.30ಕ್ಕೆ ನೋಣಾಲುಗುತ್ತುವಿನ ಗದ್ದೆಯಲ್ಲಿ ನೇಜಿ ತೆಗೆದು 9.30 ಕುಳವೂರು ಗುತ್ತಿನ ಕಂಬಳ ಗದ್ದೆಯಲ್ಲಿ ನೇಜಿ ನಾಟಿ ಮಾಡಲಾರಂಭಿಸಿದ್ದಾರೆ. ಮಧ್ಯಾಹ್ನ 12.30ರ ವೇಳೆಗೆ 4 ಮುಡಿ ಅಕ್ಕಿ ಬೆಳೆಯುವ ಗದ್ದೆ ಅಂದರೆ ಸುಮಾರು ಮೂರವರೆ ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ನಾಟಿ ಕಾರ್ಯ ಪೂರ್ಣಗೊಳಿಸಿದ್ದಾರೆ. ಗದ್ದೆಗೆ ಒಮ್ಮೆ ಇಳಿದ ಬಳಿಕ ಸ್ವಲ್ಪವೂ ಬಿಡುವು ಪಡೆಯದೇ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಗಂಗಾವತಿ ಕಾರ್ಮಿಕರ ವಿಶೇಷತೆ.

200 ಮಂದಿ ಯುವ ಕಾರ್ಮಿಕರು: ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಗಂಗಾವತಿಯಿಂದ 200 ಮಂದಿ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದು ಕಿನ್ನಿಗೋಳಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ 8 ವರ್ಷಗಳಿಂದ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ನೇಜಿ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಗತ್ಯವಿರುವಲ್ಲಿಗೆ ಎಷ್ಟು ಬೇಕೋ ಅಷ್ಟು ಕಾರ್ಮಿಕರು ಹೋಗುತ್ತಾರೆ. ದಿನವೊಂದಕ್ಕೆ ಗರಿಷ್ಠ ಸುಮಾರು 12 ಎಕ್ರೆ ಗದ್ದೆಯಲ್ಲಿ ನಾಟಿ ಮಾಡುವ ಸಾಮರ್ಥ ಹೊಂದಿದ್ದಾರೆ. ಎಕರೆಗೆ 4500 ರೂಪಾಯಿ ಪಾವತಿಸಿದರೆ ನಾಟಿ ಕಾರ್ಯವನ್ನು ಸಾಂಗವಾಗಿ ನೆರವೇರಿಸಿಕೊಡುತ್ತಾರೆ. ಆದ್ದರಿಂದ ಕಡಿಮೆ ಖರ್ಚು ಹಾಗೂ ತ್ವರಿತ ಕೃಷಿ ಕೆಲಸಕ್ಕಾಗಿ ಜಿಲ್ಲೆಯ ಜನ ಗಂಗಾವತಿಯ ಕಾರ್ಮಿಕರನ್ನು ಅವಲಂಬಿಸಿಕೊಂಡಿದ್ದಾರೆ.

ಮಹಿಳೆಯ ಸಾಗುವಳಿ ಆಸಕ್ತಿ: ನೋಣಲು ಗುತ್ತುವಿನ ಪ್ರತಿಭಾ ಹೆಗ್ಡೆಯವರಿಗೆ ಭತ್ತಾದ ಬೇಸಾಯ ಮಾಡುವುದೆಂದರೆ ಅಚ್ಚು ಮೆಚ್ಚು. ಬೇಸಾಯ ಲಾಭದಾಯಕವಲ್ಲದ್ದಿದ್ದರೂ ಕೂಡ ತನ್ನ ಆತ್ಮಸಂತೃಪ್ತಿಗಾಗಿ ಕಳೆದ ಕೆಲವು ವರ್ಷಗಳಿಂದ ಬೇಸಾಯ ಮಾಡಿಕೊಂಡು ಬರುತ್ತಿದ್ದಾರೆ. ಕುಳವೂರುಗುತ್ತು ಮನೆತನಕ್ಕೆ ಒಳಪಟ್ಟ ಕಂಬಳ ಗದ್ದೆಯನ್ನೂ ಪ್ರತಿಭಾ ಹೆಗ್ಡೆ ಹಸನಾಗಿಸಿದ್ದಾರೆ. ಕಳೆದ 5 ವರ್ಷಗಳಿಂದ ಗಂಗಾವತಿಯ ಕಾರ್ಮಿಕರ ಮೂಲ ಸಾಗುವಳಿ ಮಾಡುತ್ತಿದ್ದಾರೆ. ತನ್ನ ಪರಿಸರದ 5 ಮಂದಿ ಬೇಸಾಯ ಮಾಡುವ ರೈತರಿಗೆ ತಾನು ಬೆಳೆದ ನೇಜಿಯನ್ನು ಉಚಿತವಾಗಿ ನೀಡುತ್ತಿದ್ದಾರೆ.

Related Posts

Leave a Reply

Your email address will not be published.