ಗಂಜಿಮಠದ ಒಡ್ಡೂರು ಫಾಮ್ರ್ಸ್‍ನಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತರ ಸಮ್ಮಿಲನ

ಬಂಟ್ವಾಳ: ಕಾಂಗ್ರೆಸ್‍ನಿಂದ ವಿದ್ಯುತ್ ಕಂಬ ನಿಲ್ಲಿಸಿದರೂ ಗೆಲ್ಲುತ್ತದೆ ಎನ್ನುವ ಕಾಲಘಟ್ಟವೊಂದಿತ್ತು ಆದರೆ ಇಂದು ಬಿಜೆಪಿಯನ್ನು ಸೋಲಿಸಲು ಎಲ್ಲಾ ಪಕ್ಷದವರು ಒಟ್ಟು ಸೇರುವ ಪರಿಸ್ಥಿತಿ ನಿರ್ಮಾಣಗೊಂಡಿರುವುದಕ್ಕೆ ನಮ್ಮ ಹಿರಿಯರು ಅಂದು ಪಕ್ಷ ಸಂಘಟನೆಗಾಗಿ ಪಟ್ಟ ಪರಿಶ್ರಮವೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಅವರ ಗಂಜಿ ಮಠದಲ್ಲಿರುವ ಒಡ್ಡೂರು ಫಾಮ್ರ್ಸನಲ್ಲಿ ಮಂಗಳವಾರ ನಡೆದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಹಿರಿಯ ಕಾರ್ಯಕರ್ತರ ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ಸಿಗರಿಗೆ ಅವರ ನಾಯಕರೇ ಹೇಳಿಕೊಳ್ಳುವಂತೆ ಹಣ ಸಂಪಾದಿಸಲು ಅಧಿಕಾರ ಬೇಕಾಗಿದೆ. ಬಿಜೆಪಿಗೆ ವಿಚಾರಕ್ಕಾಗಿ ಅಧಿಕಾರ ಇದೆ, ಅಧಿಕಾರ ಎನ್ನುವುದಕ್ಕಿಂತಲೂ ಅದೊಂದು ಜವಾಬ್ದಾರಿ ಎಂದು ತಿಳಿಸಿದರು.
ಮುಖ್ಯ ಅತಿಥಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಮಾತನಾಡಿ ದ.ಕ. ಜಿಲ್ಲೆಯ ಇತಿಹಾಸದಲ್ಲಿ ಇದೊಂದು ವಿಶೇಷ ಕಾರ್ಯಕ್ರಮ. ಹಿರಿಯ ಮುಖದಲ್ಲಿ ಸಂತೋಷ ಸಾರ್ಥಕತೆಯ ಭಾವ ಕಾಣುತ್ತಿದ್ದೇವೆ. ಡಾ| ಶ್ಯಾಂಪ್ರಸಾದ್ ಮುಖರ್ಜಿಯವರ ಕನಸು ನನಸಾಗುವ ಕಾಲಘಟ್ಟದಲ್ಲಿದ್ದೇವೆ. ನಮ್ಮ ಜೀವಿತಾವಧಿಯಲ್ಲಿ ರಾಮ ಮಂದಿರ ಮಾತ್ರವಲ್ಲ ನಮ್ಮ ಹಿರಿಯರು ಕಂಡ ಎಲ್ಲಾ ಕನಸು ನನಸಾಗುವ ಸಂಭ್ರಮದಲ್ಲಿದ್ದೇವೆ ಎಂದರು.

ಶಾಸಕ ರಾಜೇಶ್ ನಾಯ್ಕ್ ಪ್ರಾಸ್ತವಿಕವಾಗಿ ಮಾತನಾಡಿ ಇದೊಂದು ಪಕ್ಷಕ್ಕೆ ಶಕ್ತಿ ಕೊಡುವ ಕೆಲಸ. ಪಕ್ಷದ ಸೂಚನೆಯಂತೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿರಿಯಯರ ಕಾರ್ಯಕ್ರಮ ನಡೆಸಿ ಮುಂದಿನ ಕಾರ್ಯಕ್ರಮದತ್ತ ಹೆಜ್ಜೆ ಇಡಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಹಿರಿಯ ನಾಗರಿಕರ ಪ್ರಕೋಷ್ಠದ ಸಂಚಾಲಕ ನಾರಾಯಣ ಗಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಹಿರಿಯ ನಾಗರಿಕರ ಪ್ರಕೋಷ್ಠದ ರಾಮಕೃಷ್ಣ ಮಯ್ಯ, ಗೋಪಾಲ ಸುವರ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.

ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು, ಡೋಬಯ ಅರಳ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕಸ್ತೂರಿ ಪಂಜ, ಸುಲೋಚನಾ ಭಟ್, ಕಮಲಾ ಪ್ರಭಾಕರ ಭಟ್, ಮಾಧವ ಮಾವೆ, ರಾಮದಾಸ್ ಬಂಟ್ವಾಳ ಮೊದಲಾದವರು ಹಾಜರಿದ್ದರು.