ಸುಳ್ಯ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿ ಆಚರಣೆ

ಸುಳ್ಯ : ಮಂಗಳೂರು ಸಮಾಚಾರ ಪತ್ರಿಕೆಯ ಪ್ರಾರಂಭವೇ ಪತ್ರಿಕಾ ದಿನಾಚರಣೆಗೆ ನಾಂದಿಯಾಗಿದೆ. ಅದೊಂದು ಪೂರ್ಣ ಪ್ರಮಾಣದ ಪತ್ರಿಕೆಯಾಗಿ ಬೆಳೆದಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮ ಕಳೆಗುಂದುತ್ತಿದೆ. ಆದರೂ ತಾಲೂಕು ಮಟ್ಟದ ಪತ್ರಿಕೆಗಳಿಗೆ ಇಂದಿನ ಕಾಲದಲ್ಲಿ ಓದುಗರಿದ್ದಾರೆ. ಜನರ ವಿಶ್ವಾಸದಿಂದಾಗಿ ಪತ್ರಿಕೋದ್ಯಮವು ಇಂದು ಉದ್ಯಮವಾಗಿ ಬೆಳೆದಿದೆ ಎಂದು ಕೇಂದ್ರ ಸಂವಹನ ಶಾಖೆ, ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಪ್ರಚಾರಾಧಿಕಾರಿ ಜೀತು ನಿಡ್ಲೆ ಹೇಳಿದರು.ಅವರು ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿ ಆಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ, ಮಾತನಾಡಿದರು

ಕೆ.ಜೆ.ಯು. ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಜೆ.ಕೆ.ರೈ ಅವರು ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವಿತರಕರಾದ ದಾಮೋದರ ಪಾಟಾಳಿ ಮಿತ್ತಡ್ಕ ಅವರನ್ನು V4 ನ್ಯೂಸ್ ನ ಎಂ.ಡಿ. ಲಕ್ಷ್ಮಣ್ ಕುಂದರ್ ಅವರು ಸುಳ್ಯ ತಾಲೂಕು ಕೆ.ಜೆ.ಯು. ವತಿಯಿಂದ ಸನ್ಮಾನಿಸಿ, ಗೌರವಿಸಿದರು.

ಚೆನ್ನೆಮಣೆ ಆಡುವುದರ ಮೂಲಕ ಜಾನಪದ ವಿದ್ವಾಂಸ ಕೇಪು ಅಜಿಲ ಅವರು ಆಟಿ ಆಚರಣೆಯ ಕುರಿತು ಉಪನ್ಯಾಸಕ್ಕೆ ಚಾಲನೆ ನೀಡಿದರು, ಬಳಿಕ ಮಾತನಾಡಿ ‘ಆಟಿ ತಿಂಗಳಲ್ಲಿ ರೋಗರುಜಿನಗಳು ಹೆಚ್ಚಾಗಿರುವ ಕಾಲವಾಗಿದೆ. ಆಟಿ ತಿಂಗಳಲ್ಲಿ ಬರುವ ಅಮವಾಸ್ಯೆಯ ದಿನ ಎಲ್ಲಾ ಔಷಧಿಗಳು ಬಂದು ಹಾಲೆ ಮರದಲ್ಲಿ ಸೇರಿಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಆಟಿ ಅಮವಾಸ್ಯೆ ದಿನದಂದು ಹಾಲೆ ಮರದ ಕಷಾಯಕ್ಕೆ ಮಹತ್ವ ನೀಡಲಾಗಿದೆ. ಆಟಿ ತಿಂಗಳಲ್ಲಿ ಬರುವ ಆಟಿ ಕಳೆಂಜ ಈಶ್ವರ ದೇವರ ಪ್ರತಿರೂಪ. ಊರಿನ ಜನರ ಯೋಗಕ್ಷೇಮ ವಿಚಾರಿಸಲು ತುಳುನಾಡಿನಲ್ಲಿ ಮನೆಮನೆಗೆ ಬರುವುದು ರೂಡಿಯಾಗಿದೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್, ಜಿಲ್ಲಾ ಪ್ರ.ಕಾರ್ಯದರ್ಶಿ ತಾರನಾಥ ಗಟ್ಟಿ ಕಾಪಿಕಾಡು, ತಾಲೂಕು ಘಟಕದ ಗೌರವಾಧ್ಯಕ್ಷ ಉಮೇಶ್ ಮಣಿಕ್ಕಾರ ಅವರು ಪತ್ರಿಕಾ ದಿನಾಚರಣೆ ಹಾಗೂ ಆಟಿ ಆಚರಣೆಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ವಿದ್ಯಾಭ್ಯಾಸದಲ್ಲಿ ವಿಶೇಷ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಾದ ಅನುಷ್ ಕೊಯಿಂಗೋಡಿ , ಕು. ಸ್ಮಿತಾ ಬಂಟ್ವಾಳ್ , ಶಮಿತಾ ರೈ ಅವರಿಗೆ ಪುರಸ್ಕಾರ ಮಾಡಲಾಯಿತು. ತಾಲೂಕು ಘಟಕದ ಕೋಶಾಧಿಕಾರಿ ಶಿವರಾಮ ಕಜೆಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿಂಗೋಡಿ ಸ್ವಾಗತಿಸಿ, ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ವಂದಿಸಿದರು.

ಸುಳ್ಯದ ನೆಹರೂ ಮೆಮೋರಿಯಲ್ ಪ.ಪೂ.ಕಾಲೇಜು, ಶಾರದಾ ಪದವಿ ಪೂರ್ವ ಕಾಲೇಜು ಹಾಗೂ ಸುಳ್ಯ ಸರಕಾರಿ ಪ್ರ.ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಟಿ ಆಚರಣೆಯ ಪ್ರಯುಕ್ತ ಹಲವು ಬಗೆಯ ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು.

Related Posts

Leave a Reply

Your email address will not be published.