ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತಾರೆ : ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ

ಕುಂದಾಪುರ : ಪಕ್ಷದ ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ತೀರ್ಮಾನವನ್ನು ಪಕ್ಷ ಹಾಗೂ ವರಿಷ್ಠರು ತೀರ್ಮಾನಿಸಲಿದ್ದಾರೆ. ಪ್ರತಿ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಅವಕಾಶ ಇದೆ. ಆದರೆ ಎಲ್ಲಿ, ಯಾರನ್ನ ಕೇಳಬೇಕು ಅಲ್ಲಿಯೇ ಕೇಳಬೇಕೇ ಹೊರತು ನನಗೆ ಟಿಕೆಟ್ ಆಗಿದೆ ಎಂದು ಗೊಂದಲ ನಿರ್ಮಾಣ ಮಾಡುವುದು ಸರಿಯಲ್ಲ. ಪಕ್ಷದ ಹಿತಕ್ಕೆ ತೊಡಕಾಗುವ ಅನಧಿಕೃತ ಸಭೆ, ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸೋದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ ನೀಡಿದ್ದಾರೆ.

ಹೆಮ್ಮಾಡಿಯ ಖಾಸಗಿ ಹೋಟೇಲ್‍ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಗಾಗಿ ಕೆಲಸ ಮಾಡುವ ಯಾರನ್ನೆ ಆಗಲಿ ಸ್ವಾಗತಿಸುತ್ತೇವೆ. ತಳಮಟ್ಟದ ಸಂಘಟನೆ ಇರುವ ಬಿಜೆಪಿಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಗುಜರಾತ್ ಹಾಗೂ ಉತ್ತರಕಾಂಡ್ ರಾಜ್ಯದ ಚುನಾವಣಾ ಮಾದರಿಯಲ್ಲಿ ರಾಜ್ಯದಲ್ಲಿಯೂ ಬದಲಾವಣೆಯ ನಿರೀಕ್ಷೆಗಳು ಇದೆ. 3-4 ಬಾರಿ ಶಾಸಕರಾದವರು, ಹೊಸಬರಿಗೆ ಅವಕಾಶ ನೀಡುವ ಸ್ವಯಂ ತೀರ್ಮಾನ ಕೈಗೊಳ್ಳಬೇಕು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಹಾಗೂ ಹಿಂದುತ್ವ ಪರವಾದ ಅಲೆ ಪ್ರಬಲವಾಗಿರುವ ಕಾರಣದಿಂದಾಗಿ ಜಾತಿ ಸಮೀಕರಣಗಿಂತ, ಪಕ್ಷದ ತತ್ವ, ಸಿದ್ದಾಂತ ಒಪ್ಪಿಕೊಳ್ಳುವ ಅಭ್ಯರ್ಥಿಗಳಿಗೆ ಅವಕಾಶ ದೊರಕುವ ಸಾಧ್ಯತೆಗಳನ್ನು ಅಲ್ಲಗಳಿಯುವಂತಿಲ್ಲ ಎಂದರು.

ಬೈಂದೂರು ಸೇರಿದಂತೆ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳು ಯಾರು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಆದರೆ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ನಮಗೆ ಆಗಿದೆ ಪಕ್ಷ ತಿರುಗಲು ಹೇಳಿದೆ ಎನ್ನುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಲಿದ್ದು, ಇಂತಹವರ ವಿರುದ್ಧ ನೋಟಿಸು ನೀಡಿ, ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯದರ್ಶಿನಿ ದೇವಾಡಿಗ, ಪ್ರಕಾಶ್ ಪೂಜಾರಿ ಜಡ್ಡು, ಕೋಶಾಧಿಕಾರಿ ಅಶೋಕ ಕುಮಾರ ಶೆಟ್ಟಿ ಸಂಸಾಡಿ, ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ದಾವೂದ್ ಇದ್ದರು.

Related Posts

Leave a Reply

Your email address will not be published.