ಕುಂದಾಪುರ ಬಾರ್ ಅಸೋಸಿಯೇಶನ್ ವತಿಯಿಂದ ನಟ ರಿಷಬ್ ಶೆಟ್ಟಿ ಅವರಿಗೆ ಸನ್ಮಾನ

ಕುಂದಾಪುರ : ಕಾಲೇಜು ದಿನಗಳಲ್ಲಿ ಇಲ್ಲಿನ ಭಂಡಾರ್‍ಕಾರ್ಸ್ ಕಾಲೇಜು, ನ್ಯಾಯಾಲಯದ ಪರಿಸರದಲ್ಲಿ ಓಡಾಡಿದ್ದ ನೆನಪುಗಳನ್ನು ಹೊಂದಿರುವ ನನಗೆ ಇದೇ ನ್ಯಾಯಾಲಯದ ಸಂಕೀರ್ಣದಲ್ಲಿ ಗೌರವಾನ್ವೀತ ನ್ಯಾಯಮೂರ್ತಿಗಳ ಉಪಸ್ಥಿತಿಯಲ್ಲಿ ಸನ್ಮಾನ ಪಡೆದುಕೊಳ್ಳಲು ತುಂಬಾ ಹೆಮ್ಮೆಯಾಗುತ್ತಿದೆ ಎಂದು ಕಾಂತಾರ ಚಲನಚಿತ್ರ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅಭಿಮಾನ ವ್ಯಕ್ತಪಡಿಸಿದರು. ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಕುಂದಾಪುರ ಬಾರ್ ಅಸೋಸೀಯೇಶನ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಲೋಕ ಅದಾಲತ್ ಸಂದರ್ಭದಲ್ಲಿ ನೀಡಿದಸಹಕಾರಕ್ಕಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇಲ್ಲಿನ ಬಾರ್ ಅಸೋಸೀಯೇಶನ್‍ಗೆ ನೀಡಿದ ಪ್ರಮಾಣ ಪತ್ರವನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಅಬ್ದುಲ್ ರಹೀಂ ಹುಸೇನ್ ಶೇಖ್ ಅವರು ಕುಂದಾಪುರದ ಬಾರ್ ಅಸೋಸೀಯೇಶನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅವರಿಗೆ ಹಸ್ತಾಂತರಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ರಾಜು, ಪ್ರಧಾನ ಸಿವಿಲ್ ನ್ಯಾಯಾಧೀಶ ಧನೇಶ್ ಮುಗಳಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರೋಹಿಣಿ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ವಿದ್ಯಾ ಎ.ಎಸ್ ಇದ್ದರು. ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬಾರ್ ಅಸೋಸೀಯೇಶನ್ ಕಾರ್ಯದರ್ಶಿ ಶ್ರೀನಾಥ ರಾವ್ ಜೆ ಸ್ವಾಗತಿಸಿದರು, ರೇಶ್ಮಾ ಶೆಟ್ಟಿ ಪ್ರಾರ್ಥಿಸಿದರು, ರವಿರಾಜ್ ಶೆಟ್ಟಿ ಮಚ್ಚಟ್ಟು ನಿರೂಪಿಸಿದರು, ಪ್ರಸನ್ನ ಶೆಟ್ಟಿ ಕೆರಾಡಿ ವಂದಿಸಿದರು.
