ಮಂಗಳೂರು: ತುಳು ಮತ್ತು ಕನ್ನಡ ರಂಗಭೂಮಿ ಕಲಾವಿದ ಸುರೇಶ್ ವಿಟ್ಲ ನಿಧನ

ತುಳು ರಂಗ ಭೂಮಿ ಹಾಗೂ ಶಾರದಾ ಆರ್ಟ್ಸ್ ಮಂಜೇಶ್ವರದ ಕಲಾವಿದ ಸುರೇಶ್ ವಿಟ್ಲ ನಿಧನ ಹೊಂದಿದರು.
ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಶಾರದ ಆರ್ಟ್ಸ್ ಮಂಜೇಶ್ವರ ತಂಡದ ಬಹು ಬೇಡಿಕೆಯ ಕಲಾವಿದರಾದ ಇವರು ತುಳು ಕನ್ನಡ ರಂಗಭೂಮಿಯ ಮೂಲಕ ತನ್ನ ಅಭಿನಯ ಪ್ರತಿಭೆಯನ್ನು ಪ್ರಜ್ವಲಿಸಿದ ಸರಳ ಸಜ್ಜನಿಕೆಯ ವ್ಯಕ್ತಿತ್ವ. ವೃತ್ತಿಯಲ್ಲಿ ಕಬಕದ ಶ್ರೀದೇವಿ ಪ್ರಿಂಟರ್ಸ್‌ನ ಮಾಲಕರಾಗಿಯೂ, ಗ್ರಾಫಿಕ್ ಡಿಸೈನರ್, ಪ್ರಿಂಟರ್ ಎಂಬ ಕಾಯಕವನ್ನು ನಿರ್ವಹಿಸಿ ಜನಾನುರಾಗಿಯಾಗಿದ್ದಾರೆ. ರಂಗಭೂಮಿಯತ್ತ ಅತಿಯಾದ ಒಲವು ಬೆಳೆಸಿಕೊಂಡಿದ್ದ ಇವರು ಸ್ಥಳೀಯ ಸಂಘ ಸಂಸ್ಥೆಗಳ ನಾಟಕಗಳಲ್ಲಿ ನಟಿಸುತ್ತಾ ಮುಂದೆ ದಿ.ಪಿ.ಬಿ.ರೈಗಳ ನಂದಿಕೇಶ್ವರ ನಾಟಕ ತಂಡದಲ್ಲಿ ವೃತ್ತಿಪರ ನಟರಾಗಿ ಗುರುತಿಸಿಕೊಂಡರು.
ನಾಟಕದಲ್ಲಿನ ಹಾಸ್ಯ, ಖಳ ಹಾಗೂ ನಾಯಕನ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಇವರನ್ನು ಬಳಿಕ ತುಳು ರಂಗಭೂಮಿ ಕೈಬೀಸಿ ಕರೆದಿತ್ತು. ಇದರಂತೆ ಶಾರದ ಆರ್ಟ್ಸ್ ಮಂಜೇಶ್ವರ, ವೈಷ್ಣವಿ ಕಲಾವಿದೆರ್ ಮಂಜೇಶ್ವರ, ರಂಗಮಿತ್ರೆರ್ ಪೆರ್ಮುದೆ ಮೊದಲಾದ ನಾಟಕ ತಂಡಗಳಲ್ಲಿ ತಿರುಗಾಟ ನಡೆಸಿದ್ದಾರೆ.
ಒಟ್ಟಿಗೆ ಪೋಯಿ, ನೆನಪುದೀಲೆ, ಅಕ್ಕ ಬತ್ತಿ ಬೊಕ್ಕ, ಎಡ್ಡೆಡ್ಡುಪ್ಪುಗ, ಎರ್ ಎಂಚಂದ್ ಏರೆಗ್ ಗೊತ್ತು, ಸಾದಿ ತಪ್ಪೊಡ್ಚಿ, ಆರ್ ಪನ್ಲೆಕ್ಕ, ಮಂಗಳ ಎನ್ನ ಅತ್ತಿಗೆ, ಪ್ರೀತಿ ಉಪ್ಪಡ್, ಕನ ಕಟ್ಟೊಡ್ಚಿ, ಕಥೆ ಎಡ್ಡೆಂಡು ನಾಟಕಗಳಲ್ಲಿ ತಮ್ಮ ಪಾತ್ರ ವೈಖರಿಯನ್ನು ಮೆರೆದು ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ಇತ್ತಿಚೆಗೆ ಶಾರದ ಆರ್ಟ್ಸ್ ನ ಬೆಳ್ಳಿ ಸಂಭ್ರಮ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗಿತ್ತು. ತುಳು ಸಾಮಾಜಿಕ ಹಾಸ್ಯಮಯ ನಾಟಕಗಳಲ್ಲದೆ ಪೌರಾಣಿಕ, ಚಾರಿತ್ರಿಕ ನಾಟಕಗಳಲ್ಲಿ ಅಭಿನಯಿಸಿದ ಸವ್ಯಸಾಚಿ ಪ್ರತಿಭೆಯಾಗಿದ್ದಾರೆ. ಮೃತರು ಪತ್ನಿ ಕಮಲಾಕ್ಷಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಕಾರ್ಯವು ಎ.7ಕ್ಕೆ ಮಧ್ಯಾಹ್ನ ಸ್ವಗೃಹದಲ್ಲಿ ನಡೆಸಲಾಗುವುದೆಂದು ಕುಟುಂಬಿಕರು ತಿಳಿಸಿದ್ದಾರೆ. ಇವರ ನಿಧನಕ್ಕೆ ತುಳು ರಂಗಭೂಮಿ ಕಂಬನಿ ಮಿಡಿದಿದೆ.
