ಮಂಗಳೂರು: ಖೋಟಾನೋಟು ಚಲಾಯಿಸುತ್ತಿದ್ದ ನಾಲ್ವರ ಬಂಧನ
ಮಂಗಳೂರು: ಕೇರಳ ರಾಜ್ಯದಲ್ಲಿ ಖೋಟಾನೋಟು ಮುದ್ರಿಸಿ ಮಂಗಳೂರು ನಗರದಲ್ಲಿ ಚಲಾವಣೆ ಮಾಡುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ 500 ರೂ. ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.
ಕಾಸರಗೋಡು ಜಿಲ್ಲೆಯ ಕರಿಚೇರಿ ಪೆರ್ಲಂ ವೀಡು, ಕೊಳತ್ತೂರು ನಿವಾಸಿ ವಿ.ಪ್ರಿಯೇಶ್(38), ಮುಳಿಯಾರು ಗ್ರಾಮ, ಮಲ್ಲಂ ನಿವಾಸಿ ವಿನೋದ್ ಕುಮಾರ್ ಕೆ.(33), ವಡಂಕುಂಕರ, ಕುನಿಯಾ, ಪೆರಿಯಾ ನಿವಾಸಿ ಅಬ್ದುಲ್ ಖಾದರ್ ಎಸ್.ಎ(58), ಕಡಬದ ಬೆಳಂದೂರು ಗ್ರಾಮ ಕುದ್ಮಾರ್ ನಿವಾಸಿ ಆಯೂಬ್ ಖಾನ್, ಪ್ರಾಯ(51) ಬಂಧಿತ ಆರೋಪಿಗಳು.
ಆರೋಪಿಗಳ ಪೈಕಿ ಪ್ರಿಯೇಶ್, ಕಾಸರಗೋಡುವಿನ ಚೆರ್ಕಳದಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾನೆ. ಈ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಖೋಟಾನೋಟುಗಳನ್ನು ತಯಾರಿಸಲಾಗುತ್ತಿತ್ತು. ಖೋಟಾನೋಟು ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕೇರಳದ ಕೋಝೀಕೋಡ್ ಮತ್ತು ದೆಹಲಿಯಿಂದ ಖರೀದಿಸಲಾಗುತ್ತಿತ್ತು. ಖೋಟಾನೋಟು ತಯಾರಿಕಾ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ ಇವರು ಸುಲಭವಾಗಿ ಹಣ ಸಂಪಾದನೆ ಮಾಡುವ ದಂಧೆಗೆ ಇಳಿದಿದ್ದರು.
ಈ ಖೋಟಾನೋಟುಗಳನ್ನು ಮಂಗಳೂರಿನ ಕ್ಲಾಕ್ ಟವರ್ ಬಳಿಯ ಲಾಡ್ಜ್ ವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ೫೦೦ ರೂ. ಮುಖಬೆಲೆಯ ಖೋಟಾನೋಟು ವಶಕ್ಕೆ ತೆಗೆದುಕೊಂಡು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 2,13,500 ಮೌಲ್ಯದ 500 ರೂ. ಮುಖಬೆಲೆಯ 427 ಖೋಟಾನೋಟುಗಳು, 4 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.