ಮೂಡುಬಿದಿರೆ:ಪವರ್ ಫ್ರೆಂಡ್ಸ್, ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಪವರ್ ಫ್ರೆಂಡ್ಸ್ ಬೆದ್ರ ಮಹಿಳಾ ಘಟಕ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಕನ್ನಡ ಭವನದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಇನ್ನರ್ ವ್ಹೀಲ್ ಕ್ಲಬ್ ಅದ್ಯಕ್ಷ ಬಿಂದಿಯಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ನಮಗೆ ಆರೋಗ್ಯ ಮುಖ್ಯವಾಗಿ ಬೇಕು. ಒಂದೊಂದು ಅಂಗವೂ ಪ್ರಾಮುಖ್ಯತೆಯನ್ನು ಹೊಂದಿದೆ ಆದ್ದರಿಂದ ನಾವೆಷ್ಟು ನಮ್ಮ ಆರೋಗ್ಯದ ಕಡೆ ಗಮನ ಹರಿಸಿದರೂ ಸಾಲದು ಎಂದ ಅವರು ಪವರ್ ಫ್ರೆಂಡ್ಸ್ ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದು ನಮ್ಮ ಕ್ಲಬ್ ಕೂಡಾ ಜತೆ ಸೇರಿ ಸಮಾಜ ಸೇವೆಯನ್ನು ಮಾಡಲು ಹೊರಟಿದ್ದು ಇದಕ್ಕೆ ಪವರ್ ಫ್ರೆಂಡ್ಸ್ ಸಹಕಾರ ನೀಡಿದೆ ಎಂದರು.
ಹೋಲಿ ರೋಸರಿ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ರಮಾ ಪದ್ಮನಾಭ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಪವರ್ ಫ್ರೆಂಡ್ಸ್ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ಸಾಮಾಜಿಕ ಕಳಕಳಿಯನ್ನು ಇಟ್ಟುಕೊಳ್ಳುವ ಮೂಲಕ ತನ್ನ ಅಸ್ತಿತ್ವನ್ನು ಉಳಿಸಿಕೊಂಡಿದೆ ಎಂದರು.ಪವರ್ ಫ್ರೆಂಡ್ಸ್ ನ ಅದ್ಯಕ್ಷ ವಿನಯ್ ಕುಮಾರ್, ಯಕ್ಷನಿಧಿಯ ಅಧ್ಯಕ್ಷೆ ಲತಾ ಸುರೇಶ್, ಆಸ್ಪತ್ರೆಯ ವೈದ್ಯೆ ಶ್ರೇಷ್ಠ, ಗ್ರೀಷ್ಮಾ, ಬಡಗ ಎಡಪದವಿನ ಗ್ರಾಮ ಆಡಳಿತಾಧಿಕಾರಿ ಪವಿತ್ರಾ ಶಿವಪ್ರಸಾದ್ ಅತಿಥಿಗಳಾಗಿ ಭಾಗವಹಿಸಿದ್ದರು.
ವಕೀಲ, ಪವರ್ ಫ್ರೆಂಡ್ಸ್ ನ ಉಪಾಧ್ಯಕ್ಷ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಡಾ.ಸೀಮಾ ಸುದೀಪ್ ವಂದಿಸಿದರು.ಶಿಬಿರದಲ್ಲಿ ೬೧ ಜನ ಸಾಮಾನ್ಯ ಆರೋಗ್ಯ ತಪಾಸಣೆ, ೩೦೮ ಜನ ಕಣ್ಣು ತಪಾಸಣೆ, ಉಚಿತ ಕಣ್ಣಿನ ಪೊರೆ ತಪಾಸಣೆಗೆ ಶಸ್ತ್ರ ಚಿಕಿತ್ಸೆ ನಡೆಸಲು ೪೯, ಕಿವಿ ಮೂಗು, ಗಂಟಲು ತಪಾಸಣೆ ೫೭, ದಂತ -೭೦, ಮಧುಮೇಹ,ರಕ್ತ ಒತ್ತಡ ೨೮೫, ಹೃದಯ ಸಂಬಂಧಿಗೆ ೮೪ ಹೀಗೆ ಒಟ್ಟು ೯೧೪ ಜನರು ತಪಾಸಣೆ ಮಾಡಿಸಿಕೊಂಡರು.ಈ ಸಂದರ್ಭದಲ್ಲಿ ಗುರುಪ್ರಸಾದ್ ಉಪಸ್ಥಿತರಿದ್ದರು.