ಸಾಹಿತ್ಯ ಅಕಾಡೆಮಿ ದೆಹಲಿ ಕೊಂಕಣಿ ಭಾಷಾ ಮುಖ್ಯಸ್ಥರಾಗಿ ಮಂಗಳೂರು ಮೂಲದ ಕವಿ ಮೆಲ್ವಿನ್ ರೊಡ್ರಿಗಸ್ ಆಯ್ಕೆ

ಕೊಂಕಣಿ ಕವಿ, ಕಾರ್ಯಕರ್ತ ಹಾಗು ಕೊಂಕಣಿ ಕಾವ್ಯದ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಕವಿತಾ ಟ್ರಸ್ಟ್ ಇದರ ಸ್ಥಾಪಕ ಕರಾವಳಿ ಮೂಲದ ಕವಿ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡೆಮಿ, ದೆಹಲಿಯಲ್ಲಿ ಕೊಂಕಣಿ ಭಾಷೆಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇಂದು ದಿನಾಂಕ 11 ಮಾರ್ಚ್ 2023 ರಂದು, ಸಂವಿಧಾನದ ಎಂಟನೆ ಪರಿಚ್ಚೇದದಲ್ಲಿ ಮಾನ್ಯತೆ ಪಡೆದಿರುವ ಭಾರತದ ಎಲ್ಲಾ ಭಾಷೆಗಳ ಸುಮಾರು 99 ಪ್ರತಿನಿಧಿಗಳು ಭಾಗವಹಿಸಿದ್ದ ಸಾಹಿತ್ಯ ಅಕಾಡೆಮಿ ಜನರಲ್ ಕಾವ್ನ್‌ಸಿಲ್ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು. ಕೊಂಕಣಿ ಭಾಷೆಯ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಗೋವಾ ರಾಜ್ಯದ ಹೊರಗೆ, ಕರ್ನಾಟಕ ರಾಜ್ಯಕ್ಕೆ ಈ ಮನ್ನಣೆ ಪ್ರಾಪ್ತವಾಗಿದೆ. ಮುಂದಿನ 5 ವರ್ಷಗಳ ಅವಧಿಗೆ ಕವಿ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡೆಮಿಯಲ್ಲಿ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

ಇದೇ ವರ್ಷದ ಜನವರಿ ತಿಂಗಳಲ್ಲಿ ಕವಿ ಮೆಲ್ವಿನ್ ಸಾಹಿತ್ಯ ಅಕಾಡೆಮಿಯ ಜನರಲ್ ಕಾವ್ನ್‌ಸಿಲ್‌ಗೆ ಆಯ್ಕೆಯಾಗಿದ್ದರು. ಅವರ ಹೆಸರನ್ನು ಸಾಹಿತ್ಯ ಅಕಾಡೆಮಿಯ ಹಿಂದಿನ ಜನರಲ್ ಕಾವ್ನ್‌ಸಿಲ್ ಕೊಂಕಣಿ ಭಾಷೆಯ ಅಂಗೀಕೃತ ಸಂಸ್ಥೆಗಳ ಶಿಫಾರಸಿನಂತೆ ಸೂಚಿಸಿತ್ತು. ಗೋವಾ ರಾಜ್ಯದಿಂದ ಪೂರ್ಣಾನಂದ ಚಾರಿ ಇವರನ್ನು ಗೋವಾ ಸರಕಾರ ನೇಮಿಸಿತ್ತು. ಉದ್ಯಮ ನಿರ್ವಹಣೆಯಲ್ಲಿ ಸ್ನಾತಕ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಕವಿ ಮೆಲ್ವಿನ್ ಪ್ರಸ್ತುತ ಮಂಗಳೂರಿನ ದೈಜಿವಲ್ಡ್ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ. ಮದ್ಯ ಪ್ರಾಚ್ಯದಲ್ಲಿ ಸುಮಾರು 15 ವರ್ಷಗಳ ಕಾಲ ಗುಣಮಟ್ಟ ಪರಿಶೋಧಕರಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ.

ಕೊಂಕಣಿ ಕವಿತೆಯ ಏಳಿಗೆಗಾಗಿ ಅವಿರತ ಶ್ರಮಿಸುತ್ತಿರುವ ಕವಿತಾ ಟ್ರಸ್ಟ್ ಸ್ಥಾಪಕರಾಗಿ ಈ ವರೆಗೆ ಕೊಂಕಣಿ ಕಾವ್ಯಕ್ಕೆ ಸಂಬದಿಸಿದಂತೆ ಸುಮಾರು 220 ಕಾರ್ಯಕ್ರಮಗಳನ್ನೂ, 34 ಪುಸ್ತಕಗಳನ್ನೂ ಪ್ರಕಟಿಸಿರುತ್ತಾರೆ. 6 ಕವನ ಸಂಕಲನಗಳು, 2 ಪ್ರಬಂದ ಸಂಕಲನಗಳು, 1 ಕೊಂಕಣಿ ಹಾಡುಗಳ ದ್ವನಿಸುರುಳಿ, 3 ಭಾಷಾಂತರ ಕೃತಿಗಳು, 6 ಸಂಪಾದಿತ ಕೃತಿಗಳು, 1 ನೀಳ್ಗತೆಯನ್ನು ಅವರು ಪ್ರಕಟಿಸಿರುತ್ತಾರೆ. ಗೋವಾದ ಕಾಣಕೋಣದಲ್ಲಿ 2019 ರಲ್ಲಿ ನಡೆದ 24 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಅವರು, ಮಂಗಳೂ ರಿನ ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಕೇಂದ್ರದ ವಿಶ್ವಸ್ಥರೂ ಆಗಿರುತ್ತಾರೆ.

ಕರ್ನಾಟಕ ಸರಕಾರದ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಗೌರವ ಪುರಸ್ಕಾರ ಸೇರಿದಂತೆ ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿ, ದೊಹಾ ಖತಾರ್‌ನ ಎಂ.ಸಿ.ಎ. ಕಲಾ ಪುರಸ್ಕಾರ, ದಾಯ್ಜಿ ದುಬಯ್ ಸಾಹಿತ್ಯ ಪುರಸ್ಕಾರ ಹಾಗೂ ಕೊಂಕಣಿ ಕುಟಮ್, ಬ್ರಾಹೇಯ್ನ್ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಅವರ ಸಾಹಿತ್ಯ ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ದೆಹಲಿ ಪ್ರಶಸ್ತಿ, ಶ್ರೀಮತಿ ವಿಮಲಾ ವಿ ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ, ಮಣಿಪಾಲದ ಡೊ| ಟಿ. ಎಂ. ಎ. ಪೈ ಪುಸ್ತಕ ಪುರಸ್ಕಾರಗಳು ಪ್ರಾಪ್ತವಾಗಿವೆ. ಹರ್ಯಾಣದ ಮಾಧವ್ ಕೌಶಿಕ್ ಅವರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಶರಾಗಿ, ದೆಹಲಿಯ ಕುಸುಮಾ ಶರ್ಮ ಉಪಾಧ್ಯಕ್ಷರಾಗಿ ಸಾಹಿತ್ಯ ಅಕಾಡೆಮಿಯಲ್ಲಿ ಇಂದು ನಡೆದ ಜನರಲ್ ಕಾವ್ನ್‌ಸಿಲ್ ಚುನಾವಣೆಯಲ್ಲಿ ಆಯ್ಕೆಯಾಗಿರುತ್ತಾರೆ. ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಗುರುತಿಸಿಕೊಂಡಿರುವ ಎಲ್ಲಾ ಭಾಷೆಗಳಿಗೆ ಮುಖ್ಯಸ್ಥರ ಚುನಾವಣೆಯೂ ಇದೇ ಸಭೆಯಲ್ಲಿ ನಡೆಯಿತು.

Related Posts

Leave a Reply

Your email address will not be published.