ಮುಂಬೈ: ನಾಪತ್ತೆಯಾಗಿದ್ದ ಸುಧೀರ್ ಕುಮಾರ್ ಸಫಲಿಗ ಶವವಾಗಿ ಪತ್ತೆ
ವಸಾಯಿಯ ಪಶ್ಚಿಮದ ಗೊರೈಪಾಡದ ಜೀವನ್ ನಗರ ನಿವಾಸಿ 35 ವರ್ಷ ಸುಧೀರ್ ಕುಮಾರ್ ಸಫಲ್ಯ ಅವರು ಆ.14ರಂದು ನಾಪತ್ತೆಯಾಗಿದ್ದು ಬಳಿಕ ಸೋಮವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ಮೂಲತಃ ಮಂಜೇಶ್ವರ ಬಳಿಯ ಉಪ್ಪಳ ನಿವಾಸಿಯಾಗಿದ್ದ ಸುಧೀರ್ ಅವಿವಾಹಿತನಾಗಿದ್ದು, ಇವರನ್ನು ಕೊಲೆ ಮಾಡಲಾದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗೊರೈಪಾಡದ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸುಧೀರ್ ಆ.14ರಂದು ಉಪ್ಪಳ ಸಮಿತಿಯ ಕಾರ್ಯದರ್ಶಿಯವರಿಗೆ ಫೋನ್ ಕರೆ ಮಾಡಿ ಭೇಟಿಗಾಗಿ ತೆರಳಿದ್ದರು. ವಸಾಯಿ ಪೂರ್ವದ ಎವರ್ ಶೈನ್‍ನಲ್ಲಿರುವ ಕಾರ್ಯದರ್ಶಿಯ ಮನೆಗೆ ತೆರಳಿದ್ದ ಸುಧೀರ್ ಅವರು 4-5ಮಂದಿ ತನ್ನನ್ನು ಹಿಂಬಾಲಿಸುತ್ತಿದ್ದು ಕೆಲ ದಿನ ಅವರ ಮನೆಯಲ್ಲಿ ಉಳಿಯಲು ಅವಕಾಶ ಕೇಳಿಕೊಂಡಿದ್ದರು. ಕಾರ್ಯದರ್ಶಿಯವರು ತಾವು ಹೊರಗೆ ಹೋಗುತ್ತಿರುವುದಾಗಿ ತಿಳಿಸಿ ಸುಧೀರ್ ಅವರನ್ನು ಅಲ್ಲಿನ ಬಸ್ ಡಿಪೋವರೆಗೆ ಮುಟ್ಟಿಸಿ ಮರಳಿದ್ದರು. ಅದಾದ ಬಳಿಕ ಸುಧೀರ್ ಇಬ್ಬರು ಸ್ನೇಹಿತರನ್ನು ಸಂಪರ್ಕಿಸಿ ಆಶ್ರಯಕ್ಕಾಗಿ ಕೇಳಿದ ಬಳಿಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಇದೀಗ ಮಂಗಳವಾರ ಸಂಜೆ ವಸಾಯಿಯ ಮಣಿಕ್‍ಪುರ ಬಳಿಯ ನಾಲೆಯೊಂದರಲ್ಲಿ ಕೊಳೆತುಹೋದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.