ಉಡುಪಿ: ನಕ್ಸಲ್ ಮಹಿಳೆ ಲಕ್ಷ್ಮಿ ತೊಂಬಟ್ಟು ಶರಣಾಗತಿ

ಉಡುಪಿ ಜಿಲ್ಲೆಯ ಆರೋಪಿತ ನಕ್ಸಲ್ ಮಹಿಳೆ ಲಕ್ಷ್ಮಿ ತೊಂಬಟ್ಟು ಶರಣಾಗಿದ್ದಾಳೆ. ಈ ಮೂಲಕ ಕರ್ನಾಟಕ ಮೂಲದ ಎಲ್ಲಾ ನಕ್ಸಲರು ಶರಣಾದಂತಾಗಿದೆ. ಲಕ್ಷ್ಮಿ ಸ್ವಇಚ್ಛೆಯಿಂದ ಶರಣಾಗಿದ್ದು ಆಕೆಯನ್ನು ’ ’ಎ’ ಕೆಟಗರಿಯಲ್ಲಿ ಪರಿಗಣಿಸಿ ಪರಿಹಾರ ನೀಡಲು ಜಿಲ್ಲಾಡಳಿತ ಶಿಫಾರಸು ಮಾಡಿದೆ.

ಉಡುಪಿಯಲ್ಲಿ ಒಂದು ಅಪರೂಪದ ನಕ್ಸಲ್ ಶರಣಾಗತಿ ನಡೆಯಿತು. ಕಳೆದ ಒಂದು ದಶಕದಿಂದ ಮುಖ್ಯ ವಾಹಿನಿಯಲ್ಲಿ ಇದ್ದರೂ ಕರ್ನಾಟಕದಲ್ಲಿ ಕಾಣಿಸಿಕೊಳ್ಳದ ಉಡುಪಿ ಮೂಲದ ಲಕ್ಷ್ಮಿ ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾಳೆ. ಈಕೆಯ ಪತಿ ಸಂಜೀವ ೨೦೦೯ರಲ್ಲಿ ಆಂಧ್ರಪ್ರದೇಶ ಸರಕಾರದ ಮುಂದೆ ಶರಣಾದ ನಂತರ, ಲಕ್ಷ್ಮಿ ಕೂಡ ಸಹಜ ಕೌಟುಂಬಿಕ ಜೀವನ ನಡೆಸುತ್ತಿದ್ದರು. ಇದೀಗ ಕರ್ನಾಟಕ ರಾಜ್ಯದಲ್ಲಿ ಸರಂಡರ್ ಪ್ಯಾಕೇಜ್ ಘೋಷಣೆಯಾದ ವಿಚಾರ ತಿಳಿದು, ಸ್ವ ಇಚ್ಛೆಯಿಂದ ಉಡುಪಿ ಜಿಲ್ಲಾಡಳಿತದ ಮುಂದೆ ಬಂದು ಶರಣಾಗಿದ್ದಾಳೆ. ಈವೇಳೆ ಮಾತನಾಡಿರುವ ತೊಂಬಟ್ಟು ಲಕ್ಷ್ಮಿ, ನಾನು ಯಾರ ಒತ್ತಡಕ್ಕೂ ಮಣಿದಿಲ್ಲ. ಸಿದ್ದರಾಮಯ್ಯ ಸರಕಾರ ಘೋಷಿಸಿರುವ ಶರಣಾಗತಿ ಪ್ಯಾಕೇಜಿನ ವಿವರ ತಿಳಿದು ಸ್ವ ಇಚ್ಛೆಯಿಂದ ಬಂದು ಶರಣಾಗಿದ್ದೇನೆ ಎಂದಿದ್ದಾಳೆ. ಇದೇ ವೇಳೆ ತನ್ನ ಊರಿನ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾಳೆ.

ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ, ಲಕ್ಷ್ಮೀ ಶರಣಾಗತಿಯ ಎಲ್ಲಾ ಸಿದ್ಧತೆ ನಡೆಸಿತ್ತು. ಬೆಂಗಳೂರಿಗೆ ಬಂದಿದ್ದ ಲಕ್ಷ್ಮಿಯನ್ನು ಕಾರ್ಕಳಕ್ಕೆ ಕರೆತಂದು, ಅಲ್ಲಿಂದ ನೇರವಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಬಂದು ಪ್ರಾರಂಭಿಕ ಪ್ರಕ್ರಿಯೆಗಳನ್ನು ನಡೆಸಲಾಯಿತು. ಮುಂದೆ ರಜತಾದ್ರಿಯಲ್ಲಿರುವ ಜಿಲ್ಲಾಡಳಿತ ಕಚೇರಿಗೆ ತೆರಳಿ, ಅಧಿಕೃತವಾಗಿ ಶರಣಾಗತಿ ಘೋಷಿಸಲಾಯಿತು. ಈವೇಳೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಈಕೆಯನ್ನು ಎ ಕೆಟಗರಿಯ ನಕ್ಸಲ್ ಎಂದು ಪರಿಗಣಿಸಿ, ಪರಿಹಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಲಕ್ಷ್ಮಿ ವಿರುದ್ಧ ಮೂರು ಪ್ರಕರಣಗಳಿವೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಸೂಕ್ತ ತನಿಖೆ ನಡೆಸುವುದಾಗಿ ಹೇಳಿದರು.

ಹೌದು, ಲಕ್ಷ್ಮಿ ವಿರುದ್ಧ ಗಂಭೀರ ತೆರನಾದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿದ ಪ್ರಕರಣ, ಹಲ್ಲೆ ಪ್ರಕರಣ ಹಾಗೂ ಕರಪತ್ರ ಅಂಟಿಸಿದ ಸಾಮಾನ್ಯ ಪ್ರಕರಣಗಳಷ್ಟೇ ಅಮಾವಾಸ್ಯೆ ಬೈಲು ಠಾಣೆಯಲ್ಲಿ ದಾಖಲಾಗಿದೆ. ಸುಲಭವಾಗಿ ಈ ಪ್ರಕರಣಗಳಿಂದ ಜಾಮೀನು ಪಡೆದು ಆರೋಪ ಮುಕ್ತ ಗೊಳ್ಳುವ ಸಾಧ್ಯತೆಗಳಿವೆ.

ಶರಣಾಗತಿ ಪ್ರಕ್ರಿಯೆ ಕುರಿತು ಮಾತನಾಡಿದ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಸದಸ್ಯ ಶ್ರೀಪಾಲ್ , ಲಕ್ಷ್ಮಿ  ಶರಣಾಗುವ ಮೂಲಕ ಕರ್ನಾಟಕ ರಾಜ್ಯದ ಮೂಲ ಹೊಂದಿರುವ ಎಲ್ಲಾ ನಕ್ಸಲರು ಶರಣಾಗತಿಯಾದಂತಾಗಿದೆ. ಶರಣಾಗತ ನಕ್ಸಲರಿಗೆ ಸೂಕ್ತ ಕಾನೂನು ನೆರವು ನೀಡುತ್ತೇವೆ. ಇವರಿಗೆ ಒಟ್ಟು ೨೨ ಮಂದಿ ನಕ್ಸಲರು ರಾಜ್ಯದಲ್ಲಿ ಶರಣಾಗತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಕರಣಗಳ ಫಾಲೋ ಅಪ್ ಮಾಡುತ್ತೇವೆ ಎಂದು ತಿಳಿಸಿದರು.

ತನ್ನ ಪತ್ನಿಯ ಶರಣಾ ಗತಿಯ ವೇಳೆ ಮಾಜಿ ನಕ್ಸಲ್ ಸಂಜೀವ ಕೂಡ ಹಾಜರಿದ್ದರು. ಸಶಸ್ತ್ರ ಹೋರಾಟದಲ್ಲಿ ನಾನು ವಿಶ್ವಾಸ ಕಳೆದುಕೊಂಡಿದ್ದೇನೆ, ಈಗಿನ ತಲೆಮಾರಿಗೆ ಈ ಹೋರಾಟ ಸೂಕ್ತವಲ್ಲ, ಅಂಬೇಡ್ಕರ್ ನೀಡಿದ ಸಂವಿಧಾನದ ಅನುಸಾರ ಪರಿಣಾಮಕಾರಿ ಹೋರಾಟ ಮಾಡಬಹುದು ಎಂದು ಹೇಳಿದರು. ಲಕ್ಷ್ಮಿಯ ಸಹೋದರ ಮತ್ತು ಸಹೋದರಿ ಹರ್ಷ ವ್ಯಕ್ತಪಡಿಸಿದರು.

ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಘೋಷಿಸಿದಂತೆ, ಕರ್ನಾಟಕ ಈಗ ನಕ್ಸಲ್ ಮುಕ್ತಗೊಂಡಿದೆ. ಸದ್ಯ ಪೊಲೀಸರು ಲಕ್ಷ್ಮಿಯನ್ನು ವಶಕ್ಕೆ ಪಡೆದು, ಆಕೆಯ ಆರೋಗ್ಯ ತಪಾಸಣೆ ಮೂಲಕ ಕಾನೂನು ಪ್ರಕ್ರಿಯೆ ಮುಂದುವರಿಸಿದ್ದಾರೆ. ವಿಕ್ರಂ ಗೌಡ ಹತ್ಯೆಯಾದ ನಂತರ, ಉಡುಪಿಯಿಂದ ನಕ್ಸಲ್ ಗುಂಪು ಸೇರಿದ ಲಕ್ಷ್ಮಿ ಶರಣಾಗತಿ ಯಾಗಿರುವುದು ಮಹತ್ವದ ಬೆಳವಣಿಗೆಯಾಗಿದ್ದು, ಜಿಲ್ಲೆಯಿಂದ ಕೆಂಪು ಹಾದಿ ಹಿಡಿದ ಎಲ್ಲರೂ ಆಡಳಿತ ವ್ಯವಸ್ಥೆಯ ಮುಂದೆ ಶರಣಾದಂತಾಗಿದೆ.

Related Posts

Leave a Reply

Your email address will not be published.