ಕೋವಿಡ್ ಸಂದರ್ಭದಲ್ಲಿ ರೈತರಿಗೆ ನೆರವಾದ ಯು. ಸೋಮಶೇಖರ್ ಗೆ ಎನ್.ಎಸ್.ಎಸ್ ರಾಷ್ಟ್ರೀಯ ಸ್ವಯಂ ಸೇವಕ ಪುರಸ್ಕಾರ

ಧಾರವಾಡ, ಜ, 14: ಕೋವಿಡ್ ಸಾಂಕ್ರಾಮಿಕ ಲೆಕ್ಕಿಸದೇ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ, ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸೋಮಶೇಖರ್ ಯು ಅವರಿಗೆ 2019 – 20 ನೇ ಸಾಲಿನ ಎನ್.ಎಸ್.ಎಸ್ ರಾಷ್ಟ್ರೀಯ ಅತ್ಯುತ್ತಮ ಸ್ವಯಂ ಸೇವಕ [ರಾಷ್ಟ್ರೀಯ ಬೆಸ್ಟ್ ವಾಲೇಂಟರ್] ಪ್ರಶಸ್ತಿ ಸಂದಿದೆ. ಹುಬ್ಬಳ್ಳಿ – ಧಾರವಾಡದಲ್ಲಿ ನಡೆಯುತ್ತಿರುವ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಸೋಮಶೇಖರ್ ಯು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು, ಪದಕ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ಕಳೆದ 5 ವರ್ಷಗಳಲ್ಲಿ ಕರ್ನಾಟಕಕ್ಕೆ ಪ್ರಶಸ್ತಿ ಬಂದಿರಲಿಲ್ಲ. ಸೋಮಶೇಖರ್ ಈ ಪ್ರಶಸ್ತಿ ಬರವನ್ನು ನೀಗಿಸಿದ್ದಾರೆ.23 ವರ್ಷದ ಶೇಷಾದ್ರಿಪುರಂ ಕಾಲೇಜು ವಿದ್ಯಾರ್ಥಿಯಾಗಿರುವ ಸೋಮಶೇಖರ್ ಸ್ವಯಂ ಸೇವಕರಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರೈತರ ಸಹಾಯಕ್ಕೆ ನಿಂತಿದ್ದ ಈ ಯುವಕ ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯ ರೈತರಿಂದ ಪೈನಾಪಲ್, ಹಣ್ಣು ತರಕಾರಿ ಸಂಗ್ರಹಿಸಿ ತಂದು ಬೆಂಗಳೂರಿನ ಹಲವು ವಸತಿ ಸಂಕಿರ್ಣಗಳಲ್ಲಿ ನೇರವಾಗಿ ಮಾರಾಟ ಮಾಡುತ್ತಿದ್ದರು. ಪ್ರತಿದಿನ ಸರಾಸರಿ 800 ರಿಂದ 1000 ಪೈನಾಪಲ್ ಗಳನ್ನು ಮಾರಾಟ ಮಾಡಿ ಗಳಿಸಿದ ಹಣವನ್ನು ಸುರಕ್ಷಿತವಾಗಿ ರೈತರಿಗೆ ತಲುಪಿಸುತ್ತಿದ್ದರು.

ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯದ ಹಲವಾರು ಕೊಳಚೆ ಪ್ರದೇಶಗಳಿಗೆ ತೆರಳಿ, ಶಿಬಿರಗಳ ಮೂಲಕ ಆರೋಗ್ಯ ಕುರಿತು ಜಾಗೃತಿ ಮೂಡಿಸಿ, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅರಣ್ಯ ಉಳಿಸಿ ಜೀವನ ಉಳಿಸಿ ಅಭಿಯಾನದಲ್ಲಿ ಬೆಂಗಳೂರು- ಮೈಸೂರು, ಬೆಂಗಳೂರು – ನಾಗರಹೊಳೆಗೆ ಸೈಕಲ್ ಜಾಥಾ ಕೈಗೊಂಡಿದ್ದರು. ಈತನ ತಾಯಿ ಗೃಹಿಣಿ, ಅಪ್ಪ ನೇಕಾರಿಕೆ ಕೆಲಸ ಮಾಡುತ್ತಿದ್ದಾರೆ. ಸ್ವಯಂ ಸೇವಕರಾಗಿ ಅತ್ತುತ್ತಮ ಸಾಧನೆ ಮಾಡುವ ಉದಾತ್ತ ದ್ಯೇಯದೊಂದಿಗೆ ಸೋಮಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ

Related Posts

Leave a Reply

Your email address will not be published.