ಸುರತ್ಕಲ್ ವ್ಯಾಪ್ತಿಯಲ್ಲಿ ಪದ್ಮರಾಜ್ ಆರ್ ರೋಡ್ ಶೋ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರ ನೇತೃತ್ವದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಮುಕ್ಕ ಶ್ರೀರಾಮ ಭಜನಾ ಮಂದಿರದಿಂದ ಆರಂಭವಾದ ರೋಡ್ ಶೋ ಮುಕ್ಕ ಮಸ್ಜಿದ್, ಮುಕ್ಕ ಸ್ಯಾಕ್ರೆಡ್ ಹಾರ್ಟ್ ಚರ್ಚ್, ಮುಕ್ಕ ಭಂಡಾರ ಮನೆಗೆ ಭೇಟಿ, ಕಾಟಿಪಳ್ಳ ಜಂಕ್ಷನ್‌ನಲ್ಲಿ ಸಭೆ ನಡೆಸಿದರು. ನಂತರ ಚೊಕ್ಕಬೆಟ್ಟು ಕೃಷ್ಣಾಪುರದಲ್ಲಿ ಸಭೆ ನಡೆಸಿ, ಸುರತ್ಕಲ್ ಜಂಕ್ಷನ್‌ನಲ್ಲಿ ಸಭೆ ಆಯೋಜಿಸಿದ್ದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು, ಕಾಂಗ್ರೆಸ್ ಸಂಸದರಾಗಿದ್ದ ಅವಧಿಯಲ್ಲಿ ನಮ್ಮ ಜಿಲ್ಲೆ ಅಭಿವೃದ್ಧಿ ಕಂಡಿದೆ. ಆ ನಂತರ ಬಂದ ಬಿಜೆಪಿ ಸಂಸದರು ಮೂರು ಸಲ ಆಯ್ಕೆಯಾಗಿ ಬಂದರೂ ನಮ್ಮ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್, ಪ್ರತಿಭಾ ಕುಳಾಯಿ, ಜಯಶೀಲ ಅಡ್ಯಂತಾಯ, ರಾಜಶೇಖರ್, ಪುರುಷೋತ್ತಮ ಚಿತ್ರಾಪುರ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
