ಸುರತ್ಕಲ್ : ಪಟ್ಲ ಫೌಂಡೇಶನ್ ಘಟಕದ ಚತುರ್ಥ ವಾರ್ಷಿಕೋತ್ಸವ

ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ದೀಪ ಪ್ರಜ್ವಲನೆಗೈದ ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಯುಎಸ್ ಎ ಮಾತನಾಡಿ, “ಅಮೇರಿಕದಲ್ಲಿ ಯಕ್ಷಗಾನ ಮಾಡಿಸುವ ಮೂಲಕ ಅಲ್ಲಿನ ಜನರಿಗೂ ನಮ್ಮ ಕರಾವಳಿಯ ಸಂಸ್ಕೃತಿಯ ಪರಿಚಯ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸಲ್ಲಬೇಕು. ಯಕ್ಷಧ್ರುವ ಟ್ರಸ್ಟ್ ಈ ಮೂಲಕ ಸಾಗರದಾಚೆಗೂ ಯಕ್ಷಪ್ರೇಮಿಗಳ ಬಾಂಧವ್ಯವನ್ನು ಬೆಸೆದಿದೆ. ಯುರೋಪ್ ರಾಷ್ಟ್ರಗಳಲ್ಲಿ ಪಟ್ಲ ತಂಡದೊಂದಿಗೆ ಸಂಚಾರ ನಡೆಸಿರುವುದು ನನ್ನ ಜೀವನದ ಅವಿಸ್ಮರಣೀಯ ದಿನಗಳು ಎಂದರು.

ಬಳಿಕ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು, “ನನ್ನನ್ನು ತಾಯಿ ಕಟೀಲು ದುರ್ಗೆ ಯಕ್ಷಗಾನ ಕಲಾವಿದರ ಸೇವೆ ಮಾಡುವಂತೆ ಅನುಗ್ರಹ ನೀಡಿದ್ದಾಳೆ. ಅವಳ ಅಣತಿಯಂತೆ ನಾನಿಂದು ಯಕ್ಷಗಾನ ಕಲಾವಿದರಿಗೆ ನೆರವು ನೀಡುತ್ತಿದ್ದೇನೆ. ಸುರತ್ಕಲ್ ನಲ್ಲಿ ಸಂಘಟನೆಯ ಘಟಕ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. ಇದೇ ರೀತಿ ಇನ್ನಷ್ಟು ಉತ್ತಮ ಕೆಲಸವನ್ನು ಸುರತ್ಕಲ್ ಘಟಕ ಮಾಡಲಿ” ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಹಿರಿಯ ತಾಳಮದ್ದಳೆ ಕಲಾವಿದ ಮಹಾಬಲ ಶೆಟ್ಟಿ ಜೋಕಟ್ಟೆ, ಹಿರಿಯ ತಾಳಮದ್ದಳೆ ಕಲಾವಿದೆ ಜಯಂತಿ ಹೊಳ್ಳ ಕೃಷ್ಣಾಪುರ, ಹಿರಿಯ ತಾಳಮದ್ದಳೆ ಕಲಾವಿದ ವಾಸುದೇವ ಆಚಾರ್ಯ ಕುಳಾಯಿ, ಯಕ್ಷಗಾನ ಕಲಾವಿದ ಕರುಣಾಕರ ಪೂಜಾರಿ ಮಧ್ಯ, ಯಕ್ಷಗಾನ ಸೇವಾಕರ್ತ ಲಿಂಗಪ್ಪ ಶೆಟ್ಟಿ ಕೃಷ್ಣಾಪುರ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷ ಸುಧಾಕರ ಎಸ್. ಪೂಂಜ, ಉಪಾಧ್ಯಕ್ಷ ಎಂ.ಜಿ. ರಾಮಚಂದ್ರ ರಾವ್, ಲೀಲಾಧರ ಶೆಟ್ಟಿ ಕಟ್ಲ, ಪಿ.ಕೃಷ್ಣಮೂರ್ತಿ ಸುರತ್ಕಲ್, ನಾರಾಯಣ ಶೆಟ್ಟಿ ಕಟ್ಲ, ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಗೋವಿಂದ ದಾಸ ಕಾಲೇಜ್ ನಿವೃತ್ತ ಉಪ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಯಸ್.ಜಿ., ಟ್ರಸ್ಟಿಗಳಾದ ಕೃಷ್ಣ ಶೆಟ್ಟಿ ಶ್ರೀ ದ್ವಾರ, ಸಹನಾ ರಾಜೇಶ್ ರೈ, ದೇವೇಂದ್ರ ಕೆ ಶೆಟ್ಟಿ, ನಾರಾಯಣ ಶೆಟ್ಟಿ, ಸಂತೋಷ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.