HomeFresh Newsಇಂಟಕ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಖ್ಯಾತ ವಕೀಲೆ ಕರೀಷ್ಮಾ ಎಸ್. ಪದಗ್ರಹಣ: ಕಾರ್ಮಿಕರಿಗೆ ಉಚಿತ ಕಾನೂನು...

ಇಂಟಕ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಖ್ಯಾತ ವಕೀಲೆ ಕರೀಷ್ಮಾ ಎಸ್. ಪದಗ್ರಹಣ: ಕಾರ್ಮಿಕರಿಗೆ ಉಚಿತ ಕಾನೂನು ನೆರವು ಘಟಕ ರಚನೆ ಘೋಷಣೆ

ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC) ಜಿಲ್ಲಾ ಯುವ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಖ್ಯಾತ ವಕೀಲೆ ಕರೀಷ್ಮಾ ಎಸ್. ಅವರು ಪದಗ್ರಹಣ ಮಾಡಿದ್ದು, ಕಾರ್ಮಿಕರಿಗೆ ಸಂಬಂಧಿಸಿದ ಯಾವುದೇ ಕಾನೂನು ಸಮಸ್ಯೆಗಳಿಗೆ ಉಚಿತ ಕಾನೂನು ಸಲಹೆ ಮತ್ತು ಅಗತ್ಯವಿದ್ದರೆ ಉಚಿತ ಮೊಕದ್ದಮೆ ಸೌಲಭ್ಯ ಒದಗಿಸಲು ಒಂದು ಕಾನೂನು ನೆರವು ಘಟಕವನ್ನು ರೂಪಿಸುವುದಾಗಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಪದಗ್ರಹಣ ಸಮಾರಂಭದ ಬಳಿಕ ಮಾತನಾಡಿದ ಅವರು, ನಾನು ವಕೀಲೆಯಾಗಿರುವ ನಿಟ್ಟಿನಲ್ಲಿ ಕಾರ್ಮಿಕರಿಗೆ ನ್ಯಾಯ ದೊರಕಿಸುವುದು ನನ್ನ ಕರ್ತವ್ಯ ಎಂದು ಒತ್ತಿ ಹೇಳಿದರು.
ಕರೀಷ್ಮಾ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, “ಇದು ನನಗೆ ಕೇವಲ ಪದಗ್ರಹಣ ಸಮಾರಂಭವಲ್ಲ; ಇದು ಭಾವನಾತ್ಮಕ ಕ್ಷಣ, ದೊಡ್ಡ ಜವಾಬ್ದಾರಿಯ ಆರಂಭ. ನಮ್ಮ ಕುಟುಂಬ ಕಾಂಗ್ರೆಸ್ ಸಿದ್ಧಾಂತವನ್ನು ಹಲವು ವರ್ಷಗಳಿಂದ ನಂಬಿಕೊಂಡು ದುಡಿದಿದೆ. ಆ ಮೌಲ್ಯಗಳೇ ನನಗೆ ನ್ಯಾಯಕ್ಕಾಗಿ ಹೋರಾಡುವ ಶಕ್ತಿ ನೀಡಿ ಬೆಳೆಸಿವೆ,” ಎಂದು ಹೇಳಿದರು. ಇಂಟಕ್‌ ಅನ್ನು ಸ್ವಾತಂತ್ರ್ಯಾನಂತರ ಗಾಂಧೀಜಿಯ ಆದರ್ಶಗಳು ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನ್ಯಾಯದ ಕಲ್ಪನೆಗಳನ್ನು ಆಧರಿಸಿ ನಿರ್ಮಿಸಲಾಗಿದೆ ಎನ್ನುವುದನ್ನು ಅವರು ನೆನಪಿಸಿದರು. “ನೆಹರೂ ಮತ್ತು ಸರ್ದಾರ್ ಪಟೇಲ್ ಅವರ ದೃಷ್ಟಿಯಿಂದ ಹುಟ್ಟಿದ ಇಂಟಕ್ ಇಂದು ದೇಶದ ಕೋಟ್ಯಂತರ ಕಾರ್ಮಿಕರ ಬೆನ್ನೆಲುಬು. ಕಾರ್ಮಿಕರನ್ನು ‘ಓಟ್‌ ಬ್ಯಾಂಕ್’ ಅಲ್ಲ, ರಾಷ್ಟ್ರ ನಿರ್ಮಾಣದ ಅಡಿಪಾಯ ಎಂದು ಪರಿಗಣಿಸುವ ಏಕೈಕ ಸಂಘಟನೆ ನಮ್ಮದು,” ಎಂದು ಹೇಳಿದರು.


ಮಹಿಳಾ ಕಾರ್ಮಿಕರು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಲೆಕ್ಕಿಸಿ, ವೇತನ ತಾರತಮ್ಯ, ಸುರಕ್ಷತಾ ಕೊರತೆ, ಕೆಲಸದ ಸ್ಥಳದಲ್ಲಿ ಕಿರುಕುಳ, ಶಿಶುಪಾಲನಾ ಸೌಲಭ್ಯಗಳ ಅಭಾವ ಮುಂತಾದ ಸಮಸ್ಯೆಗಳ ವಿರುದ್ಧ ಹೋರಾಡುವುದಾಗಿ ಅವರು ಸ್ಪಷ್ಟಪಡಿಸಿದರು. ಪ್ರತಿ ಮಹಿಳಾ ಕಾರ್ಮಿಕರೂ ಗೌರವ, ಸಮಾನ ವೇತನ ಮತ್ತು ಸುರಕ್ಷತೆಯೊಂದಿಗೆ ಕೆಲಸ ಮಾಡಬೇಕು. ಶೋಷಣೆಗೆ ಒಳಗಾದ ಪ್ರತಿಯೊಬ್ಬರಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು.


ತನ್ನ ಅವಧಿಯಲ್ಲಿ ಹೊಸ ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ್ಯ ಶಿಬಿರಗಳು, ಅಸಂಘಟಿತ ಕಾರ್ಮಿಕರ—ಬೀದಿ ವ್ಯಾಪಾರಿಗಳು, ಮನೆ ಕೆಲಸದವರು, ಕಟ್ಟಡ ಕಾರ್ಮಿಕರು—ಇಂಟಕ್ ಅಡಿಯಲ್ಲಿ ಸಂಘಟನೆ ಹಾಗೂ ಅವರಿಗೆ ಸರ್ಕಾರದ ಯೋಜನೆಗಳು ತಲುಪುವ ವ್ಯವಸ್ಥೆ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ. ಅಲ್ಲದೆ ಕೆಲಸದ ಸ್ಥಳದಲ್ಲಿ ಆರೋಗ್ಯ–ಸುರಕ್ಷತೆ ಕಡ್ಡಾಯಗೊಳಿಸಲು ಅಧಿಕಾರಿಗಳಿಗೆ ಒತ್ತಡ ಹೇರಿ ಇವುಗಳನ್ನು ಸಮರ್ಪಕವಾಗಿ ಜಾರಿಗೆ ತರುವುದಾಗಿ ಹೇಳಿದರು.
ನಾನೊಬ್ಬಳು ವಕೀಲೆಯಾಗಿ ನ್ಯಾಯಕ್ಕಾಗಿ ಹೋರಾಡುತ್ತೇನೆ. ಇಂಟಕ್ ಅಧ್ಯಕ್ಷೆಯಾಗಿ ನಿಮ್ಮ ಪರ ಧ್ವನಿಯಾಗುತ್ತೇನೆ. ಕಾಂಗ್ರೆಸ್ ಕಾರ್ಯಕರ್ತೆಯಾಗಿ ಸತ್ಯ ಮತ್ತು ಸಮಾನತೆ ಪರ ನಿಲ್ಲುತ್ತೇನೆ. ಅನ್ಯಾಯವನ್ನು ಸಹಿಸದಿರೋಣ, ಒಟ್ಟಾಗಿ ಮುನ್ನಡೆಯೋಣ ಎಂದು ಕರೀಷ್ಮಾ ಎಸ್. ಕರೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments