‘ಎಸ್.ಡಿ.ಎಂ ಯಶಸ್ವಿ ಪ್ರಯೋಗಗಳ ರೂವಾರಿ ಡಾ. ಬಿ.ಯಶೋವರ್ಮ’
ಉಜಿರೆ ಡಿಸೆಂಬರ್ ೫: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ನಾಯಕತ್ವವನ್ನುವಹಿಸಿಕೊಂಡು ಯಶಸ್ವಿ ಪ್ರಯೋಗಗಳನ್ನು ನಡೆಸಿದ್ದರು ಡಾ. ಬಿಯಶೋವರ್ಮ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಹೇಳಿದರು.ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮಾಜಿ ಕಾರ್ಯದರ್ಶಿ ದಿ. ಡಾ. ಬಿ. ಯಶೋವರ್ಮಅವರ ೬೮ನೇ ಹುಟ್ಟು ಹಬ್ಬದ ಅಂಗವಾಗಿ ಎಸ್.ಡಿ.ಎಂ ಕಲಾಕೇಂದ್ರ ಆಯೋಜಿಸಿದ್ದ
‘ಯಶೋಸ್ವಪ್ನ’ ಕಾರ್ಯಕ್ರಮದಲ್ಲಿ ಅವರ ತತ್ವ ಮತ್ತುಕಾರ್ಯಗಳನ್ನು ಮೆಲುಕು ಹಾಕಿದರು.ವಿದ್ಯಾರ್ಥಿಗಳು ಕೇವಲ ಶಿಕ್ಷಣ ಮಾತ್ರವಲ್ಲದೇ ಕಲೆ-ಸಂಸ್ಕೃತಿ-ಸಾಹಿತ್ಯದಮೂಲಕ ವ್ಯಕ್ತಿತ್ವ ವಿಕಸನಗೊಳಿಸಬೇಕು ಎಂಬುದು ದಿ. ಡಾ. ಬಿ.ಯಶೋವರ್ಮ ಚಿಂತನೆಯಾಗಿತ್ತು. ಈ ಚಿಂತನೆಗಳನ್ನು ನೂತನಪ್ರಯೋಗಗಳ ಮುಖಾಂತರ ವಿದ್ಯಾರ್ಥಿಗಳ ವಿಕಸನಕ್ಕೆ ಬೇಕಾಗುವ ವಾತಾವರಣವನ್ನು ಸೃಷ್ಟಿಸುವ ಮೂಲಕ ಅನುಷ್ಠಾನಕ್ಕೆ ತಂದರು. ಅದು
ಕೇವಲ ಅವರ ಚಿಂತನೆಯಾಗಿರದೇ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೂ ಅವರ ಕೌಶಲ್ಯಕ್ಕೆ ಪೂರಕವಾದ ಸೌಕರ್ಯಗಳನ್ನು ಒದಗಿಸಿ ಅದರಲ್ಲಿ
ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದ್ದರು ಎಂದು ಹೇಳಿದರು. ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಚಾರಗಳು ನಿಂತ ನೀರಿನಂತಾಗಲು ಬಿಡದೇ ಹೊಸತನಗಳನ್ನು ಹುಟ್ಟು ಹಾಕುವುದು ಮತ್ತು ಅದನ್ನು ಕಾರ್ಯರೂಪಕ್ಕೆ ತರುವುದು ಅವರ ವಿಶೇಷತೆ ಎಂದರು. ಡಾ. ಬಿ ಯಶೋವರ್ಮ ವೃತ್ತಿಯಿಂದ ಸಸ್ಯಶಾಸ್ತ್ರದ ಉಪನ್ಯಾಸಕರಾಗಿ ನಂತರ ಶಿಕ್ಷಣ ತಜ್ಞರಾಗಿ, ಶಿಕ್ಷಣ ಸಂಸ್ಥೆಯ ಆಡಳಿತಗಾರನಾಗಿ, ಕೇವಲ ಎಸ್.ಡಿ.ಎಂ
ಶಿಕ್ಷಣ ಸಂಸ್ಥೆ ಮಾತ್ರವಲ್ಲದೇ ಶೈಕ್ಷಣಿಕ ಕ್ಷೇತ್ರಕ್ಕೇ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಈ ಮೂಲಕ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ
ದೇಶದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಸಾಲಿಗೆ ಸೇರುವಂತಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ. ಎ ಜಯಕುಮಾರ್ ಶೆಟ್ಟಿ ಮಾತನಾಡಿ ಜಗತ್ತಿನಲ್ಲಿ ಅವರು ನಿರೀಕ್ಷಿಸಿದ ಬದಲಾವಣೆಯನ್ನು ಮೊದಲು ಜೀವನದಲ್ಲಿ
ಅಳವಡಿಸಿಕೊಂಡು ಇತರರಿಗೆ ಮಾರ್ಗದರ್ಶಿಯಾಗಿದ್ದರು ಎಂದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ ಶೆಟ್ಟಿ ಮಾತನಾಡಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಪ್ರೇರಕ ಶಕ್ತಿಯಾಗಿದ್ದ ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆದರ್ಶ ವ್ಯಕ್ತಿಗಳಾಗಲು ಸಾಧ್ಯ ಎಂದು ಕಾರ್ಯ ವೈಖರಿಯನ್ನು ನೆನೆದರು. ಕಾರ್ಯಕ್ರಮದಲ್ಲಿ ೬೮ ದೀಪಗಳನ್ನು ಪ್ರಜ್ವಲಿಸುವ ಮೂಲಕ ದೀಪನಮನವನ್ನು ಸಲ್ಲಿಸಿದರು. ಅವರ ನೆಚ್ಚಿನ ಹಾಡುಗಳನ್ನು ವಿದ್ಯಾರ್ಥಿಗಳು ಹಾಡಿದರು. ಈ ಸಂದರ್ಭದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ
ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆಯನ್ನು ಮಾಡಿದ ಕಲಾ
ಕೇಂದ್ರದ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಕೊನೆಯಲ್ಲಿ ಅವರ ಚಿಂತನೆಯಂತೆ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವುದು ಹಾಗೂ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ
ರಾಮಚಂದ್ರ ಪುರೋಹಿತ್, ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕ ಸುವೀರ್ ಜೈನ್ ಮತ್ತು ಸೂಪರಿಂಟೆಂಡೆಂಟ್ ಯುವರಾಜ
ಪೂವಣಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಶ್ರವಣ್ ಜೈನ್ ನಿರೂಪಿಸಿದರು. ವಿದ್ಯಾರ್ಥಿನಿ ಅನ್ನಪೂರ್ಣ ಸ್ವಾಗತಿಸಿ, ಸೌಂದರ್ಯ ಶೆಟ್ಟಿ ವಂದಿಸಿದರು.
ವರದಿ: ಪ್ರೀತಿ ಹಡಪದ, ದ್ವಿತೀಯ ವರ್ಷ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ