ಮಾ.22ರಿಂದ ನಗರದಲ್ಲಿ ‘ಸ್ಟ್ರೀಟ್ ಫುಡ್ ಫಿಯೆಸ್ಟಾ’

ಮಂಗಳೂರು: ಮಂಗಳೂರಿನ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಾಯೋಜಕತ್ವದಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ದಕ್ಷಿಣ ಶಾಸಕ ವೇದವ್ಯಾಸ್ಕಾ ಮತ್ ನೇತೃತ್ವದಲ್ಲಿ ‘ಸ್ಟ್ರೀಟ್ ಫುಡ್ ಫಿಸ್ಟಾ’ (ಬೀದಿಬದಿ ಆಹಾರೋತ್ಸವ) ಮಾ.22ರಿಂದ 26ರ ವರೆಗೆ ನಡೆಯಲಿದೆ ಎಂದು ಸಂಘಟನಾ ಸಮಿತಿ ಮಾರ್ಗದರ್ಶಕ ಯತೀಶ್ ಬೈಕಂಪಾಡಿ ಹೇಳಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಜೆ 5ರಿಂದ ರಾತ್ರಿ 11ರವರೆಗೆ ಕರಾವಳಿ ಉತ್ಸವ ಮೈದಾನದಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಮೂಲಕ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್‌ವರೆಗೆ (ರಸ್ತೆಯ ಒಂದು ಮಗ್ಗುಲಲ್ಲಿ ) ಆಹಾರೋತ್ಸವ ಆಯೋಜಿಸಲಾಗಿದೆ. ವಿಶೇಷವಾಗಿ ತುಳುನಾಡಿನ ಸಾಂಪ್ರದಾಯಿಕ ತಿಂಡಿ ತಿನಸುಗಳು ಸೇರಿದಂತೆ ಹೊರ ರಾಜ್ಯಗಳ ಸಸ್ಯಾಹಾರ ಹಾಗೂ ಮಾಂಸಾಹಾರ ಆಹಾರಗಳಿಗೆ ಆದ್ಯತೆ ಕಲ್ಪಿಸಲಾಗುತ್ತದೆ. ತುಳುನಾಡಿನ ಆಹಾರ ವೈವಿಧ್ಯತೆ ಪರಿಚಯಿಸುವುದರೊಂದಿಗೆ ಸ್ವಉದ್ಯೋಗಕ್ಕೆ ಪೂರಕ ವೇದಿಕೆ ನಿರ್ಮಿಸುವ ಪ್ರಯತ್ನ ಇದಾಗಿದೆ ಎಂದರು.

ಪ್ರಸಿದ್ಧ ಹೋಟೆಲ್ ಉದ್ಯಮ, ಐಸ್ ಕ್ರೀಮ್ ಸೇರಿದಂತೆ ಮನೆ ಉತ್ಪನ್ನಗಳು, ಸ್ವಾವಲಂಬಿ ಉತ್ಪಾದಕರು ಆಹಾರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಯಾ ಸಮಾಜದ ಪ್ರಮುಖ ತಿಂಡಿ-ತಿನಸುಗಳೂ ಇರಲಿದೆ. ಜತೆಗೆ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕರಾವಳಿಯಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದರು. ಕುಟುಂಬ ಸಮೇತರಾಗಿ ಗೆಳೆಯರ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಹಾಗೂ ಇತರ ಶುಭ ಕಾರ್ಯಕ್ರಮವನ್ನು ಇಲ್ಲಿ ಆಚರಿಸಬಹುದು.

ಸಿನಿಮಾ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ನೃತ್ಯ, ಹಾಡು, ಮಿಮಿಕ್ರಿ, ನಟನೆ, ಬೀದಿ ಜಾದೂ, ಕರೊಕೆ, ವಾದ್ಯಗೋಷ್ಠಿ, ಬೀದಿ ಸರ್ಕಸ್, ಸೈಕಲ್ ಬ್ಯಾಲೆನ್ಸ್, ಬಗ್ಗಿ ವಾಹನ, ಗೇಮ್ಸ್, ಜುಂಬಾ, ಫಿಟ್ ನೆಸ್ ಕ್ರೀಡೆ, ಯೋಗ ಹಾಗೂ ಇನ್ನಷ್ಟು ಪ್ರದರ್ಶನ ಮತ್ತು ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ದೇಹದಾರ್ಡ್ಯ, ಪಟಾಕಿ ಪ್ರದರ್ಶನ, ಪಾದ ಮಸಾಜ್, ಚೆಂಡೆ ಮತ್ತು ನಾಸಿಕ್ ಬ್ಯಾಂಡ್, ಕಿರು ಮ್ಯೂಸಿಕ್ ಬ್ಯಾಂಡ್, ಬೆಂಕಿ ನೃತ್ಯ, ಸೆಲ್ಲಿ ಕೌಂಟರ್, ಫ್ಲಾಶ್ ಬೆಳಕಿನಾಟ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡುವ ಸಲುವಾಗಿ ವಿಶೇಷವಾಗಿ ವರ್ಣ ರಂಜಿತ ವಿದ್ಯುತ್ ದೀಪಾಲಂಕಾರ, ತಾಲೀಮು ಪ್ರದರ್ಶನ, ಸಂಗೀತ ಕಾರ್ಯಕ್ರಮ, ಹುಲಿವೇಷ ಬಣ್ಣಗಾರಿಕೆ ಸ್ಪರ್ಧೆ, ಗೂಡು ದೀಪ ಮುಂತಾದವುಗಳನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪ್ರತಿ ಜಂಕ್ಷನ್‌ಗಳಲ್ಲಿ ನಾಲ್ಕು ವೇದಿಕೆಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಗಾಗಿ ಪ್ರತ್ಯೇಕ ವಲಯ, ಕುದುರೆ ಸವಾರಿ, ಒಂಟೆ ಸವಾರಿ, ಸೆಲ್ಫಿ ಬೂತ್, ಹಳೆಯ ಮಾದರಿಯ ಕಾರುಗಳ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರಲಿದೆ. ಸುಮಾರು 200ರಷ್ಟು ಸ್ಟಾಲ್‌ಗಳು ಇರಲಿದ್ದು, ವಾಹನಗಳಿಗೆ ಕರಾವಳಿ ಉತ್ಸವ ಮೈದಾನ ಹಾಗೂ ಮಣ್ಣಗುಡ್ಡಗಳಲ್ಲಿ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗುವುದು ಎಂದರು. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಗಿರಿಧರ್ ಶೆಟ್ಟಿ, ಸದಸ್ಯರಾದ ಅಶ್ವಥ್ ಕೊಟ್ಟಾರಿ, ಲಲಿತ್, ಜಗದೀಶ್ ಕದ್ರಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.