ರಬ್ಬರ್ ಟ್ಯಾಪಿಂಗ್ ಕತ್ತಿ ಎದೆಯೊಳಗೆ ಹೊಕ್ಕಿ ಮಹಿಳೆಸಾವು

ಕಡಬ : ರಬ್ಬರ್ ಟ್ಯಾಪಿಂಗ್ ಕತ್ತಿಯ ರೂಪದಲ್ಲಿ ಬಂದ ಸಾವು ಮಹಿಳೆಯನ್ನು ಬಲಿಪಡೆದ ಘಟನೆ ಕಡಬ ತಾಲೂಕಿನ ಎಡಮಂಗಲದಲ್ಲಿ ಮಾ.17ರಂದು ನಡೆದಿದೆ. ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ ಎಂಬವರ ಪತ್ನಿ ಗೀತಾ(37 ವ.) ಎಂಬವರು ಬೆಳ್ಳಂಬೆಳಗ್ಗೆ 6.30 ಗಂಟೆ ಹೊತ್ತಿಗೆ ತನ್ನ ಗಂಡನ ಜೊತೆ ತಮ್ಮದೇ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದರು.

ಟ್ಯಾಪಿಂಗ್ ಮಾಡುತ್ತಾ ಹೋಗುತ್ತಿದ್ದಾಗ ಇಳಿಜಾರು ಪ್ರದೇಶದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಬೀಳುವಾಗ ಕೈಯಲ್ಲಿದ್ದ ಹರಿತವಾದ ಟ್ಯಾಪಿಂಗ್ ಕತ್ತಿ ಎದೆಯೊಳಗೆ ಹೊಕ್ಕಿದೆ. ಕತ್ತಿ ನುಗ್ಗಿದ ರಭಸಕ್ಕೆ ಕತ್ತಿಯ ಕೈ ಹಿಡಿಯುವ ಜಾಗ ತುಂಡಾಗಿದೆ. ಗೀತಾ ಅವರು ಕೂಗಿದಾಗ ಗಂಡ ಓಡಿ ಬಂದಿದ್ದು ಕೈ ಭಾಷೆಯಲ್ಲೇ ಕತ್ತಿ ನುಗ್ಗಿದ ಜಾಗ ತೋರಿಸಿದರು ಎನ್ನಲಾಗಿದೆ. ಗಂಡ ಕತ್ತಿಯನ್ನು ಎಳೆದು ತೆಗೆದಾಗ ಗೀತಾ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಮೃತ ಗೀತಾ ಅವರಿಗೆ 8 ನೇ ತರಗತಿ ಓದುತ್ತಿರುವ ಪುತ್ರ ಹಾಗೂ ಪುತ್ರಿ ಎಲ್.ಕೆ.ಜಿ ಅಭ್ಯಾಸ ನಡೆಸುತ್ತಿದ್ದಾರೆ. ಈ ಕುರಿತು ಮೃತರ ಗಂಡ ಶಿವರಾಮ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

Related Posts

Leave a Reply

Your email address will not be published.