ಸುಳ್ಯ: ಬದುಕನ್ನೇ ಸಾಹಿತ್ಯಕ್ಕಾಗಿ ಮೀಸಲಿಟ್ಟವರು ಶೇಷಗಿರಿರಾವ್: ಚಂದ್ರಾವತಿ ಬಡ್ಡಡ್ಕ

ಕನ್ನಡ ಸಾಹಿತ್ಯಕ್ಕೆ ವಿಮರ್ಶಾ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದವರು ಎಲ್ ಎಸ್ ಶೇಷಗಿರಿ ರಾವ್. ಅವರು ಸರಳ , ನೇರ ನಡೆ-ನುಡಿಯ ಮೇರು ವ್ಯಕ್ತಿತ್ವವನ್ನು ರೂಪಿಸಿಕೊಂಡು ಕನ್ನಡ ಸಾಹಿತ್ಯದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಬಿ ಎಂ ಶ್ರೀ ಅವರ ಪ್ರೋತ್ಸಾಹದಿಂದ ಮಾತೃಭಾಷೆ ಕನ್ನಡದಲ್ಲಿ ಕೃತಿಗಳನ್ನು ರಚಿಸಿದರು. ಬಹಳ ಚಿಕ್ಕವಯಸ್ಸಿನಲ್ಲಿ ಬರಹದಲ್ಲಿ ತೊಡಗಿಕೊಂಡ ಇವರು ಸ್ವಾತಂತ್ರ ಹೋರಾಟದಲ್ಲೂ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದರು. ಶಾಂತ ಸ್ವಭಾವದ ತಾಳ್ಮೆಯಿಂದ ಇರುವ ಇವರು ಯುವ ಜನತೆ ಹಾಗೂ ವಿದ್ಯಾರ್ಥಿಗಳಿಗಾಗಿ ಪುಸ್ತಕಗಳನ್ನು ರಚಿಸಿ ‘ವಿದ್ಯಾರ್ಥಿ ಮಿತ್ರ’ ಎನಿಸಿಕೊಂಡವರು. ಮಾತೃಭಾಷೆಗೆ ಪ್ರಾಧಾನ್ಯತೆ ನೀಡಿದ ಎಲ್ . ಎಸ್. ಎಸ್ ಅವರು ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ನಿಂದ ಹೊರಬಂದು ಬದುಕನ್ನು ಸಾಹಿತ್ಯಕ್ಕಾಗಿ ಮೀಸಲಿಟ್ಟಂತ ಶ್ರೇಷ್ಠ ಕವಿಗಳ, ಬರಹಗಾರರ ಪುಸ್ತಕಗಳನ್ನು ಓದಬಹುದು. ಆ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾಗಿರುವ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಇವರು ಹೇಳಿದರು. ಅವರು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪ್ರೊ. ಎಲ್ ಎಸ್ ಶೇಷಗಿರಿರಾವ್ ಅವರ ಜನ್ಮ ಶತಮಾನೋತ್ಸವ ಸಂಸ್ಮರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಯವರು ಮಾತನಾಡಿ ” ಪ್ರೊ. ಎಲ್ ಎಸ್ ಶೇಷಗಿರಿ ರಾವ್ ಅವರು ಸರಳ ಜೀವನವನ್ನು ನಡೆಸಿದ ಕಾರಣ ತಮ್ಮ ಉಳಿತಾಯದಲ್ಲಿ ಇಂದೂ ಸಹ ದತ್ತಿ ನಿಧಿಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳನ್ನು ಪೋಷಿಸುತ್ತಿದ್ದಾರೆ. ಕನ್ನಡ ಕಲಿಯುವ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಹಕರಿಸುತ್ತಿದ್ದಾರೆ. ಅವರ ಸರಳ ಸಜ್ಜನ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಲಿ. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಳನ್ನು ಸದಾ ಸ್ಮರಿಸುತ್ತ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯೋಣ” ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಮೀ ದಾಮ್ಲೆ ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಕನ್ನಡ ಶಿಕ್ಷಕಿ ಶ್ರೀಮತಿ ಸವಿತಾ ಎಂ ಧನ್ಯವಾದವಿತ್ತರು. ಶಿಕ್ಷಕ
ದೇವಿಪ್ರಸಾದ ಜಿ. ಸಿ ನಿರೂಪಿಸಿದರು .
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕದ ಪದಾಧಿಕಾರಿಗಳು, ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
