ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಸಚಿವ ಅಂಗಾರ ಭೇಟಿ : ಉಪ್ಪುಕಳ ಗ್ರಾಮಕ್ಕೆ ಶೀಘ್ರದಲ್ಲೇ ಸೇತುವೆ ನಿರ್ಮಾಣದ ಭರವಸೆ
ಮಳೆಯಿಂದ ಹಾನಿಗೊಳಗಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಉಪ್ಪುಕಳ ಗ್ರಾಮಕ್ಕೆ ಬಂದರು ಹಾಗೂ ಮೀನುಗಾರಿಕೆ ಸಚಿವ ಅಂಗಾರ ಭೇಟಿ ನೀಡಿದ್ದು, ಶೀಘ್ರದಲ್ಲೇ ಸೇತುವೆ ನಿರ್ಮಾಣದ ಭರವಸೆ ನೀಡಿದರು.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 124 ಸೇತುವೆಗಳು ನಿರ್ಮಾಣವಾಗಿವೆ. ವಿಶೇಷ ಪ್ರಾಶಸ್ತ್ಯ ನೀಡಿ ಗ್ರಾಮಗಳನ್ನು ಬೆಸೆಯುವ ಸಂಪರ್ಕ ಸೇತುವೆ ನಿರ್ಮಿಸಲಾಗುತ್ತದೆ. ಉಪ್ಪುಕಳದಲ್ಲೂ ಅತೀ ಶೀಘ್ರದಲ್ಲೇ ಸೇತುವೆ ರಚನೆಯಾಗಲಿದ್ದು, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಸಚಿವ ಅಂಗಾರ ಉಪ್ಪುಕಳದ ಸಮಸ್ಯೆಯನ್ನು ತೆರೆದಿಟ್ಟ ಮಾಧ್ಯಮಗಳ ಮೇಲೆ ಹರಿಹಾಯ್ದರು. ಮಾಧ್ಯಮಗಳು ವರದಿ ಮಾಡಿದ ಮಾತ್ರಕ್ಕೆ ಸೇತುವೆ ರಚನೆಯಾಗುವುದಿಲ್ಲ. ಅದಕ್ಕೆ ಸಮಯಾವಕಾಶ ಬೇಕು. ಎಲ್ಲದಕ್ಕೂ ಟೀಕೆ ಮಾಡುವುದು ಸರಿಯಲ್ಲ, ನಾವು ಈಗಾಗಲೇ ಮಾಡಿರುವ ಕೆಲಸವನ್ನು ಕೂಡಾ ಹೇಳಬೇಕು ಎಂದು ವಾಗ್ದಾಳಿ ಮಾಡಿದರು.