ಕರಾವಳಿಯಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೋಮು ಹಿಂಸಾಚಾರ ನಿಯಂತ್ರಿಸಲು ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆ’ಯನ್ನು ರಚಿಸಲಿದ್ದೇವೆ’ ಎಂದು ಗೃಹಸಚಿವ ಜಿ.ಪರಮೇಶ್ವರ ತಿಳಿಸಿದರು.

ಕೋಮುಸೂಕ್ಷ್ಮ ಪರಿಸ್ಥಿತಿಯ ಕುರಿತು ಅವಲೋಕಿಸಲು ಹಿರಿಯ ಪೊಲೀಸ್ ಆಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯವರ ಜೊತೆ ಶನಿವಾರ ವಿಶೇಷ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆಯನ್ನು ನಕ್ಸಲ್ ನಿಗ್ರಹ ಪಡೆ ಮಾದರಿಯಲ್ಲಿ ಪ್ರತ್ಯೇಕವಾಗಿ ರಚಿಸುತ್ತೇವೆ. ಇದು ಪೊಲೀಸರ ಸಹಯೋಗದಲ್ಲಿ ಕೆಲಸ ಮಾಡಲಿದೆ. ಯಾರು ಕೋಮು ಚಟುವಟಿಕೆಗಳನ್ನು ನಡೆಸುತ್ತಾರೆ, ಯಾರು ಅದನ್ನು ಬೆಂಬಲಿಸುತ್ತಾರೆ, ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಕಾರ್ಯಪಡೆಗೆ ಒದಗಿಸುತ್ತೇವೆ’ ಎಂದರು.

ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ನಡೆದ ಬಳಿಕ ಈ ಜಿಲ್ಲೆಗಳಲ್ಲಿ ಕೋಮು ಹಿಂಸೆ ಮತ್ತೆ ಮರುಕಳಿಸಿದೆ ಎಂಬ ಭಾವನೆ ಜನರಲ್ಲಿ ಬಂದಿರಬಹುದು. ಜನ ಸಮುದಾಯ ಇದನ್ನು ಇಷ್ಟ ಪಡುವುದಿಲ್ಲ. ಈ ಜಿಲ್ಲೆಗಳು ಶಾಂತಿಯಿಂದ ಇರಬೇಕು, ಜನ ಶಾಂತಿಯಿಂದ ಬದುಕಬೇಕು. ಇಲ್ಲಿ ಬಂಡವಾಳ ಹೂಡಿಕೆ ಆಗಬೇಕು. ಜನರಿಗೆ ಉದ್ಯೋಗ ಸಿಗಬೇಕು ಎಂದು ಪೊಲೀಸ್ ಇಲಾಖೆ ಮತ್ತು ಸರ್ಕಾರ ಬಯಸುತ್ತದೆ. ಇದನ್ನು ಗಮನ ದಲ್ಲಿಟ್ಟುಕೊಂಡು ಎರಡು ವರ್ಷಗಳಿಂದ ಎಲ್ಲ ರೀತಿಯ ಕ್ರಮ ತೆಗದುಕೊಂಡಿದ್ದೆವು. ಗುಂಪು ಹಲ್ಲೆ ನಡೆಸಿ ಕೇರಳದ ವಯನಾಡಿನ ಅಶ್ರಫ್ ಎಂಬವನನ್ನು ಕೊಲೆ ಮಾಡಿದ್ದು ಹಾಗೂ ಸುಹಾಸ್ ಶೆಟ್ಟಿ ಹತ್ಯೆ ಕೋಮು ಸೌಹಾರ್ದಕ್ಕೆ ಸವಾಲು ಆಗಿವೆ’ ಎಂದರು.
ಪ್ರಚೋದನಾಕಾರಿ ಹೇಳಿಕೆ ಕೊಡುವವರ ಮೇಲೆ ಹೇಳಿಕೆ ಕೊಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲು ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದೇವೆ. ಈ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದೇವೆ ಎಂದರು.ಕೋಮು ಹಿಂಸೆ ನಿಗ್ರಹ ಕೋಶವನ್ನು ಈ ಹಿಂದೆ ರಚಿಸಿದ್ದೆವು. ಆದರೆ ಅದು ಪೊಲೀಸ್ ಬಲದ ಒಳಗೆ ಇತ್ತು. ಈಗ ಸ್ಥಾಪಿಸುವ ಕಾರ್ಯಪಡೆ ಪ್ರತ್ಯೇಕ ಘಟಕವಾಗಿ ಕಾರ್ಯನಿರ್ವಹಿಸಲಿದೆ. ಈ ಎರಡು ಜಿಲ್ಲೆಗಳಿಗೆ ಮಾತ್ರ.ವಾದರ ಅವಶ್ಯಕತೆ ಇದೆ. ಬೇರೆ ಜಿಲ್ಲೆಗಳಲ್ಲಿ ಅವಶ್ಯಕತೆ ಇಲ್ಲ. ಅಂತಹ ಪರಿಸ್ಥಿತಿ ಬಂದರೆ ಮುಂದೆ ನೋಡಿಕೊಳ್ಳೊಣ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾನುನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗ್ರವಾಲ್, ಪಶ್ಚಿಮ ವಲಯ ಐಜಿಪಿ ಅಮಿತ್ ಶಾ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಅಮ.ಪಿ. ಭಾಗವಹಿಸಿದ್ದರು.