ಮಂಗಳೂರು:ಸುಹಾಸ್ ಶೆಟ್ಟಿ ಹತ್ಯೆ: 8 ಆರೋಪಿಗಳ ಬಂಧನ:ಗೃಹ ಸಚಿವ ಡಾ. ಜಿ. ಪರಮೇಶ್ವರ್

ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೃಹಸಚಿವ ಜಿ.ಪರಮೇಶ್ವರ ತಿಳಿಸಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ ಎಲ್ಲ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ’ ಎಂದರು.
ಆರೋಪಿಗಳ ವಿವರ ನೀಡಿದ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ‘ಕಿನ್ನಿಪದವಿನಲ್ಲಿ ಮೇ 1 ರಂದು ರಾತ್ರಿ ಸುಹಾಸ್ ಶೆಟ್ಟಿ ಕೊಲೆ ನಡೆದಿತ್ತು. ಕಿನ್ನಿಪದವಿನಲ್ಲಿ ವಾಸವಾಗಿರುವ ಪೇಜಾವರ ಗ್ರಾಮದ ಶಾಂತಿಗುಡ್ಡೆಯ ಅಬ್ದುಲ್ ಸಫ್ವಾನ್ ( 29), ಶಾಂತಿಗುಡ್ಡೆಯ ನಿಯಾಜ್ (28), ಕೆಂಜಾರು ಗ್ರಾಮದ ಮೊಹಮ್ಮದ್ ಮುಝಮಿಲ್ (32), ಕಳವಾರು ಕುರ್ಸುಗುಡ್ಡೆಯ ಕಲಂದರ್ ಶಾಫಿ (31), ಚಿಕ್ಕಮಂಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ರುದ್ರಪಾದೆಯ ರಂಜಿತ್ (19), ಕಳಸ ಕೋಟೆ ಹೊಳೆ ಮಾವಿನಕೆರೆ ಗ್ರಾಮದ ನಾಗರಾಜ್ (20), ಜೋಕಟ್ಟೆಯ ಮೊಹಮ್ಮದ್ ರಿಜ್ವಾನ್ (28) ಹಾಗೂ ಕಾಟಿಪಳ್ಳ ಮಂಗಳಪೇಟೆಯ ಅದಿಲ್ ಮೆಹರೂಫ್ ಬಂಧಿತ ಆರೋಪಿಗಳು ಎಂದು ಮಾಹಿತಿ ನೀಡಿದರು.

ಸಫ್ವಾನ್ ಮೇಲೆ 2023ರಲ್ಲಿ ಸುರತ್ಕಲ್‌ನಲ್ಲಿ ಸುಹಾಸ್ ಶೆಟ್ಟಿ ಸಹಚರ ಪ್ರಶಾಂತ್ ಹಾಗೂ ಧನರಾಜ್ ಮತ್ತಿತರರು ಹಲ್ಲೆ ನಡೆಸಿದ್ದರು. ಸುಹಾಸ್ ಶೆಟ್ಟಿ ತನ್ನನ್ನು ಕೊಲೆ ಮಾಡಬಹುದು ಎಂಬ ಭಯ ಸಫ್ವಾನ್ ಗೆ ಇತ್ತು. ಆತ 2022ರಲ್ಲಿ ಸುರತ್ಕಲ್‌ನಲ್ಲಿ ಕೊಲೆಯಾಗಿದ್ದ ಮಹಮ್ಮದ್ ಫಾಝಿಲ್ ಸೋದರ ಆದಿಲ್‌ನನ್ನು ಈಚೆಗೆ ಸಂಪರ್ಕಿಸಿದ್ದ. ಫಾಝಿಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಕೊಲೆ ಸಲುವಾಗಿ ಆದಿಲ್ ₹ 5 ಲಕ್ಷ ನೀಡಲು ಒಪ್ಪಿದ್ದ , ₹ 3 ಲಕ್ಷ ನೀಡಿದ್ದ ಎಂದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಪೊಲೀಸ್ ಕಸ್ಟಡಿಗೆ ಪಡೆಯುತ್ತೇವೆ. ಅವರ ವಿಚಾರಣೆ ಬಳಿಕ ಹತ್ಯೆಯ ಸಮಗ್ರ ವಿವರ ಸಿಗಲಿದೆ ಎಂದರು.