ತಿರುಪತಿ: ಕಾಲ್ತುಳಿತ ಪ್ರಕರಣ: 6 ಮಂದಿ ಮೃತ್ಯು: 30 ಮಂದಿಗೆ ಗಾಯ
ತಿರುಪತಿಯ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ದರ್ಶನ ಟಿಕೆಟ್ ಪಡೆಯಲು ಸೇರಿದ್ದ ಭಕ್ತರ ಸಮೂಹದಲ್ಲಿ ಉಂಟಾದ ನೂಕು ನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿದೆ. ಬುಧವಾರ ಸಂಜೆ ನಡೆದ ಈ ದುರಂತದಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ವಿಷ್ಣು ನಿವಾಸಮ್, ಶ್ರೀನಿವಾಸಂ ಮತ್ತು ಪದ್ಮಾವತಿ ಪಾರ್ಕ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ರಾತ್ರಿ 8 ಗಂಟೆಯ ಸುಮಾರಿಗೆ ತಿರುಮಲ ತಿರುಪತಿ ದೇವಸ್ಥಾನ ಅಧಿಕಾರಿಗಳು ಟಿಕೆಟ್ ವಿತರಣೆ ಆರಂಭಿಸಿದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಯಿತು. ಅಸ್ವಸ್ಥ ಭಕ್ತರೊಬ್ಬರು ಸರದಿಯಿಂದ ನಿರ್ಗಮಿಸಲು ಗೇಟು ತೆರೆದ ಸಂದರ್ಭದಲ್ಲಿ ಎರಡು ಕಡೆಗಳಲ್ಲಿ ಕಾಲ್ತುಳಿತ ಸಂಭವಿಸಿತು. ಮುಂಜಾನೆಯಿಂದಲೇ ಸರದಿಯಲ್ಲಿ ಕಾಯುತ್ತಿದ್ದ ಭಕ್ತರು ಮುಂದೆ ನುಗ್ಗಿದ್ದು, ತೀವ್ರ ಜನದಟ್ಟಣೆ ಮತ್ತು ಅವ್ಯವಸ್ಥೆಗೆ ಕಾರಣವಾಯಿತು.
ತಮಿಳುನಾಡಿನ ಸೇಲಂನಿಂದ ಆಗಮಿಸಿದ್ದ ಮಲ್ಲಿಕಾ ಎಂಬ ಮಹಿಳೆ ದೇಗುಲ ನಗರಿಯ ರುಯಿಯಾ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟರೆ ಇತರ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ. ಮತ್ತಿಬ್ಬರು ಎಸ್ವಿಐಎಂಎಸ್ನಲ್ಲಿ ಮೃತಪಟ್ಟರು. ಹಲವು ಮಂದಿ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿರುವುದರಿಂದ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೈಕುಂಠ ಏಕಾದಶಿಯಂದು 2-3 ಲಕ್ಷ ಮಂದಿ ದರ್ಶನ ಪಡೆಯುತ್ತಾರೆ. ಜನವರಿ 10, 11 ಮತ್ತು 12ರಂದು ನಡೆಯುವ ವೈಕುಂಠ ದ್ವಾರ ಸೇವಾ ದರ್ಶನಕ್ಕಾಗಿ ಒಂಬತ್ತು ಕೇಂದ್ರಗಳ 94 ಕೌಂಟರ್ಗಳಲ್ಲಿ ಟೋಕನ್ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.