ತುಳು ಧರ್ಮ ಸಂಶೋಧನಾ ಕೇಂದ್ರ ಪೇರೂರು : ಸಾಧಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ

ಕರಾವಳಿ ಲೇಖಕಿಯರ ವಾಚಕಿಯರ ಸಂಘ, ತುಳು ಧರ್ಮ ಸಂಶೋಧನಾ ಕೇಂದ್ರ ಪೇರೂರು ಇವರ ಸಹಯೋಗದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಿತು.

ಮಂಗಳೂರಿನ ಜ್ಯೋತಿ ಸರ್ಕಲ್‌ನ ಮಹಿಳಾ ಸಭಾದಲ್ಲಿ ನಡೆದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಪೇರೂರಿನ ತುಳು ಸಂಶೋಧನಾ ಕೇಂದ್ರದ ಪೇರೂರು ಜಾರು ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ.ಎಮ್. ರೋಹಿಣಿ ಅವರು ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಕಿ ಮಾತ್ರವಲ್ಲದೆ, ಮೊತ್ತ ಮೊದಲ ಬಾರಿಗೆ ಮಹಿಳಾ ಮಂಡಳಿ ಸ್ಥಾಪಕರು. ಹೊಸ ಮೌಢ್ಯಗಳು ವಿದ್ಯಾವಂತರಲ್ಲಿ ಬಹಳ ವೇಗವಾಗಿ ಹಬ್ಬುತ್ತಿದೆ. ಆಗಿನ ಕಾಲದಲ್ಲಿ ಮಹಿಳೆಯರಲ್ಲಿದ್ದ ಎಲ್ಲಾ ಮೌಢ್ಯಗಳನ್ನು ತೊಡೆದು ಹಾಕಲು ಶ್ರಮಿಸಿದವರು ಸಾವಿತ್ರಿಬಾಯಿ ಪುಲೆಯವರು ಎಂದರು.

ಮೂಡುಬಿದಿರೆಯ ಅಲ್ ಪುರ್ಕಾನ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲೆ ನಜ್ರನಾ ಶಾಫಿ ಮತ್ತು ಸುರತ್ಕಲ್ ಕೃಷ್ಣಾಪುರದ ಚೈತನ್ಯ ಪಬ್ಲಿಕ್ ಸ್ಕೂಲ್‌ನ ಇಂಗ್ಲಿಷ್ ಟೀಚರ್ ಶಶಿಕಲಾ ಆರ್. ಎಚ್. ಎಮ್, ಫಾತಿಮಾ ಶೇಖ್ ಪ್ರಶಸ್ತಿ ವಿಜೇತರಾದ ಜಾನಕಿ ಪುತ್ರನ್ ಉಳ್ಳಾಲ ಅವರಿಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳ್ಯಾರು ಅವರು ಮಾತನಾಡಿ, ಸಾವಿತ್ರಿಬಾಯಿ ಪುಲೆ, ಜ್ಯೋತಿ ಬಾ ಪುಲೆ, ಕಮಲಾದೇವಿ ಚಟ್ಟೋಪಧ್ಯಾಯರಂತಹ ಅನೇಕ ಮಹಿಳೆಯರು ಮಾಡಿದ ಹೋರಾಟಗಳು  ಇಂದಿಗೂ ಪ್ರಸ್ತುತ ಎಂದ ಅವರು, ಮಹಿಳೆಯರು ಮೌಢ್ಯದಿಂದ ಹೊರಗೆ ಬರಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಸುಧಾ ನಾಗೇಶ್, ಸುಜಾತ ಕೊಡ್ಮಾಣ್, ಉಪಸ್ಥಿತರಿದ್ದರು. ಆಕೃತಿ ಭಟ್ ಆಶಯ ಗೀತೆ ಹಾಡಿದರು. ಸುಧಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಸುಜಾತ ಸುವರ್ಣ ಧನ್ಯವಾದ ಸಮರ್ಪಿಸಿದರು.

Related Posts

Leave a Reply

Your email address will not be published.