ಸಮ್ಮೇಳನಕ್ಕೆ ಮೆರಗು ನೀಡಿದ ‘ಕಲಾವೈಭವ’

ಉಜಿರೆ, : ದಕ್ಷಿಣ ಕನ್ನಡ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಕಾಲೇಜಿನ ಕಲಾಕೇಂದ್ರದ ವಿದ್ಯಾರ್ಥಿಗಳು ‘ಕಲಾವೈಭವ’ ನೃತ್ಯದ ಮೂಲಕ ಕಲಾರಾಧಕರನ್ನು ರಂಜಿಸಿದರು.

ಕಲಾಕೇಂದ್ರದ ಒಟ್ಟು 200 ಮಂದಿ ವಿದ್ಯಾರ್ಥಿಗಳು ತಂಡೋಪತಂಡವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಕೇರಳ ಶೈಲಿಯ ಮೋಹಿನಿಯಾಟ್ಟಂ, ಶಿವತಾಂಡವ ನೃತ್ಯ, ಗುಜರಾತಿನ ಗರ್ಬಾ ದಾಂಡ್ಯ, ಕಥಕ್ ಹೀಗೆ ವಿವಿಧ ರೀತಿಯ ಭಕ್ತಿ ಭಾವ ಸ್ಫುರಿಸುವ ನೃತ್ಯಗಳು ಕಲಾರಾಧಕರ ಮನಸೆಳೆದವು.

ಸತತ ಒಂದು ಗಂಟೆ ಕಾಲ ನಡೆದ ನೃತ್ಯ ಪ್ರದರ್ಶನದಲ್ಲಿ ಮಹಿಷಾಸುರ ಮರ್ದನದ ದೃಶ್ಯ ಕಲಾ ವೈಭವ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಶಿವತಾಂಡವ ನೃತ್ಯವನ್ನು ಅಮೋಘವಾಗಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಕಲಾಕೇಂದ್ರದ ವಿದ್ಯಾರ್ಥಿಗಳನ್ನು ಎಸ್ ಡಿ ಎಂ ಕಾಲೇಜಿನ ಕ್ಷೇಮಪಾಲನಾ ಅಧಿಕಾರಿ ಬಿ. ಸೋಮಶೇಖರ್ ಶೆಟ್ಟಿ ಅಭಿನಂದಿಸಿದರು.