ಜಿ-20 ಶೃಂಗಸಭೆ ಅಂಗವಾಗಿ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಹಣಕಾಸು ಸಚಿವರು, ಕೇಂದ್ರೀಯ ಬ್ಯಾಂಕ್ ಗೌರ್ನರ್ ಗಳ ಸಭೆ – ಸಚಿವೆ ನಿರ್ಮಲಾ ಸೀತಾರಾಮನ್

ಬೆಂಗಳೂರು, ನ, 26; ಭಾರತ ಜಿ-20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿಕೊಂಡಿದ್ದು, ಬರುವ ಫ್ರಬ್ರವರಿಯಲ್ಲಿ ಬೆಂಗಳೂರಿನಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಗೌರ್ನರ್ ಗಳ ಮಹತ್ವದ ಸಭೆ ನಡೆಯಲಿದ್ದು, ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಂತೆ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ನವೋದ್ಯಮಗಳಿಗೆ ಸೂಚಿಸಿದ್ದಾರೆ.

ಕೋರ್ ಡಿಸ್ಕವರಿ ಯುವರ್ ಕೋರ್, ವನನಂ ಹಾಗೂ ಟೆನ್ ಥೌಸಂಡ್ ಎಕೋ ಸಿಸ್ಟಮ್ ಪಾರ್ಟರ್ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಾಳೆ ರಾಷ್ಟ್ರಮಟ್ಟದ ನವೋದ್ಯಮಗಳನ್ನು ಒಳಗೊಂಡ ಶೃಂಗ ಸಭೆ (ಎಸ್.ಐ.ಎಸ್) ಉದ್ಘಾಟಿಸಿ ಮಾತನಾಡಿದ ಅವರು, ಈ ಮಹತ್ವದ ಸಭೆಯನ್ನು ಕರ್ನಾಟಕದ ನವೋದ್ಯಮಗಳು ಸುಸಜ್ಜಿತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ತಮಗೆ ಬೇಕಾದ ಆರ್ಥಿಕ ನೆರವು ಪಡೆಯಲು ವ್ಯವಹಾರಿಕ ಮಾದರಿಯ ಕಾರ್ಯಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸಲಹೆ ಮಾಡಿದರು.

ತಾವು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತಮ್ಮ ತವರು ರಾಜ್ಯಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲ ಮಾಡಿಕೊಡುವ ಸಲುವಾಗಿ ಈ ಮಹತ್ವದ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿದ್ದೇನೆ. ಪ್ರತಿಯೊಂದು ರಾಜ್ಯದಲ್ಲೂ ಒಂದಲ್ಲಾ ಒಂದು ಸಭೆಗಳು ನಡೆಯಲಿವೆ. ಮುಂದಿನ ವರ್ಷದ ಜಿ-20 ಸಮ್ಮೇಳನ ಅತ್ಯಂತ ಮಹತ್ವ ಪಡೆದುಕೊಳ್ಳಲಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿ ಈ ವರ್ಷವನ್ನು ವಿಶ್ವ ಸಂಸ್ಥೆ ಅಂತರರಾಷ್ಟ್ರೀಯ ತೃಣಧಾನ್ಯಗಳ ವರ್ಷ ಎಂದು ಘೋಷಿಸಿದ್ದು, ಕರ್ನಾಟಕ ತೃಣಧಾನ್ಯಗಳನ್ನು ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ತೃಣ ಧಾನ್ಯಗಳ ವಲಯದಲ್ಲಿ ನವೋದ್ಯಮಗಳಿಗೂ ಸಹ ಹೆಚ್ಚಿನ ರೀತಿಯಲ್ಲಿ ಅವಕಾಶಗಳಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ರೈತರ ಆದಾಯ ಹೆಚ್ಚುವುದಲ್ಲದೇ ಕೃಷಿ ಸಮುದಾಯಕ್ಕೂ ಅನುಕೂಲವಾಗಲಿದೆ. ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ತಂತ್ರಜ್ಞಾನ ಇದೀಗ ವ್ಯಾಪಕವಾಗಿ ಬೆಳವಣಿಗೆಯಾಗುತ್ತಿದ್ದು, ಭಾರತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿಲ್ಲ. ತಂತ್ರಜ್ಞಾನ ಒದಗಿಸುವ ದೇಶವಾಗಿ ಪರಿವರ್ತನೆ ಹೊಂದಿದೆ. ಪ್ರತಿ ತಿಂಗಳು 6 ಶತಕೋಟಿ ಡಾಲರ್ ನಷ್ಟು ಡಿಜಿಟಲ್ ವಹಿವಾಟು ನಡೆಯುತ್ತಿದ್ದು, ಇದರಿಂದ ಜನ ಸಾಮಾನ್ಯರು ಸಬಲೀಕರಣಗೊಳ್ಳುತ್ತಿದ್ದಾರೆ. ಜನ ಜೀವನ ಕೂಡ ಸುಗಮವಾಗುತ್ತಿದೆ ಎಂದರು.

ದೇಶದ ಡಿಜಿಟಲ್ ಆರೋಗ್ಯ ಕ್ಷೇತ್ರದಲ್ಲೂ ವ್ಯಾಪಕ ಬದಲಾವಣೆಗಳಾಗುತ್ತಿದ್ದು, ಟೆಲಿ ಸಂಜೀವಿನಿ ಯೋಜನೆಯಡಿ 7 ಕೋಟಿ ಜನ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದಿದ್ದಾರೆ. ಹೆಚ್ಚಿನ ಮಂದಿ ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಿದ್ದಾರೆ. ತಂತ್ರಜ್ಞಾನದ ಜೊತೆಗೆ ಇದೀಗ ಕೌಶಲ್ಯ ಸೇರಿದರೆ ಅದ್ಭುತವಾದ್ದದನ್ನು ಸಾಧಿಸಬಹುದು ಎಂದು ಹೇಳಿದರು.

ಹವಾಮಾನ ಬದಲಾವಣೆ ವಿಚಾರದಲ್ಲಿ ಭಾರತ ಮಂಚೂಣಿಯಲ್ಲಿದ್ದು, ಪ್ಯಾರೀಸ್ ಒಪ್ಪಂದ ಅನುಷ್ಠಾನದಲ್ಲಿ ಮಹತ್ವದ ಪಾತ್ರ ನಿಭಾಹಿಯಿತ್ತಿದೆ. ಮಳೆ ಇದೀಗ ಅನಿಶ್ಚಿತವಾಗಿದ್ದು, ಒಂದು ತಿಂಗಳು ಬೀಳುವ ಮಳೆ ಒಂದೆರಡು ದಿನಗಳಲ್ಲಿ ಸುರಿಯುತ್ತಿದೆ. ಹೀಗಾಗಿ ಹವಾಮಾನ ರಕ್ಷಣೆಗೆ ವಿಶೇಷ ಒತ್ತು ನೀಡುವ ಅಗತ್ಯವಿದ್ದು, ನವೋದ್ಯಮಗಳು ಹವಾಮಾನ ಬದಲಾವಣೆ ತಡೆಯುವ, ಪರಿಸರ ರಕ್ಷಣೆಯಂತಹ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಬೇಕು. ಸಾಮಾಜಿಕ ಮತ್ತು ಪರಿಸರ ಹೊಣೆಗಾರಿಕೆ ನವೋದ್ಯಮಗಳಿರಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

Related Posts

Leave a Reply

Your email address will not be published.