ಕರಾಟೆ, ಜೂಡೋ, ಸಿಲಂಬಂನಂತಹ ಸಮರ ಕಲೆಗಳ ಜೊತೆಗೆ ಭರತನಾಟ್ಯದಲ್ಲೂ ಸೈ ಎನಿಸಿಕೊಂಡ ವೆನಿಲ್ಲಾ

ಬಂಟ್ವಾಳ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಪ್ರತಿಭೆಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಬಲು ವಿರಳ. ಕರಾಟೆ, ಜೂಡೋ, ಸಿಲಂಬಂನಂತಹ ಸಮರ ಕಲೆಗಳ ಜೊತೆ ಜೊತೆಗೆ ಭರತನಾಟ್ಯದಲ್ಲೂ ಪ್ರವೀಣ್ಯತೆ ಪಡೆದುಕೊಂಡ ಅಪರೂಪದ ಬಹುಮುಖ ಪ್ರತಿಭೆ ವೆನಿಲ್ಲಾ ಮಣಿಕಂಠ. ಜೂಡೋದಲ್ಲಿ ಬ್ಲಾಕ್‍ಬೆಲ್ಟ್ ಪಡೆದು ರಾಷ್ಟ್ರೀಯ ಮಟ್ಟದ ಮಾರ್ಷಲ್ ಆರ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದುಕೊಂಡಿರುವ ಬಂಟ್ವಾಳದ ಈ ಪ್ರತಿಭೆ ಭರತನಾಟ್ಯದಲ್ಲೂ ಅದ್ಭುತ ಪ್ರದರ್ಶನವನ್ನು ನೀಡಿ ಸೈ ಎನಿಸಿಕೊಂಡಿದ್ದಾಳೆ.

Vennila Silambam

ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ನೀಲಕಂಠ- ಸುಮತಿ ದಂಪತಿ ಪುತ್ರಿ, ಮಂಗಳೂರು ಸುರತ್ಕಲ್‍ನ ಎನ್‍ಐಟಿಕೆಯ ಎಂಟೆಕ್ ವಿದ್ಯಾರ್ಥಿನಿ ವೆನಿಲ್ಲಾ ಮಣಿಕಂಠ ಸಮರ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ ನಿಪುಣೆ. ಕರಾಟೆ, ಜೂಡೋ, ಬಾಕ್ಸಿಂಗ್, ಸ್ಕೇಟಿಂಗ್, ಯೋಗ, ಟ್ವಿಕ್ವಾಂಡೋ, ಬಿಲ್ವಿದ್ಯೆ, ಸಿಲಂಬಂ ಕಸರತನ್ನು ಲೀಲಾಜಾಲಾವಾಗಿ ಕರಗತ ಮಾಡಿಕೊಂಡಿರುವ ಈಕೆಗೆ ಭರತನಾಟ್ಯವೂ ಒಲಿದಿದೆ.

Vennila Silambam

ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ಅವರ ಗರಡಿಯಲ್ಲಿ ಪಳಗಿರುವ ವೆನಿಲ್ಲಾ ಮಣಿಕಂಠ ತನ್ನ ಬಾಲ್ಯದಿಂದಲೇ ಮಾರ್ಷಲ್ ಆರ್ಟ್‍ಗಳ ಬಗ್ಗೆ ಆಸಕ್ತಿ ವಹಿಸಿಕೊಂಡವರು. ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಗೆದ್ದುಕೊಂಡಿರುವ ಈಕೆ ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಷಲ್ ಆರ್ಟ್ ತರಬೇತಿಯನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ವಿಶಾಖ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಸಿಲಂಬಂ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

Vennila Silambam

ಭರತನಾಟ್ಯ ಪ್ರವೀಣೆ:
ವೆನಿಲ್ಲಾ ಮಣಿಕಂಠ ಉತ್ತಮ ಶಾಸ್ತ್ರೀಯ ನೃತ್ಯ ಕಲಾವಿದೆಯೂ ಹೌದು. ಹೇಗೆ ವೆನಿಲ್ಲಾ ಮಣಿಕಂಠ ಅವರ ಸಮರ ವಿದ್ಯೆಗಳನ್ನು ಪ್ರೇಕ್ಷಕರು ಬೆರಗುಗಣ್ಣಿನಿಂದ ನೋಡುತ್ತಾರೋ ಅಂತೆಯೇ ಆಕೆ ಭರತನಾಟ್ಯ ಪ್ರದರ್ಶನವನ್ನು ಅಷ್ಟೇ ಕುತೂಹಲದಿಂದ ವೀಕ್ಷಿಸುತ್ತಾರೆ. ಇತ್ತೀಚೆಗೆ ಬ್ರಹ್ಮಕೂಟ್ಲುವಿನ ಶ್ರೀ ಗಣೇಶ ಚೈತನ್ಯ ಸತ್ಸಂಗ ಗುಂಡಿಬೆಟ್ಟು ವತಿಯಿಂದ ನಡೆದ 25ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವೆನಿಲ್ಲಾ ಮಣಿಕಂಠ ಅವರ ನಾಟ್ಯ ವೈಭವ ಪ್ರೇಕ್ಷಕರ ಮನ ಗೆದ್ದಿದೆ. ಕರಾಟೆ ಮೊದಲಾದ ಸಮರ ಕಲೆಗಳ ಜೊತೆ ಬಾಲ್ಯದಿಂದ ಶಾಸ್ತ್ರೀಯ ನೃತ್ಯಾಭ್ಯಾಸ ಮಾಡುತ್ತಿರುವ ಈಕೆ ಕಳೆದ 6 ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಬಾಲಕೃಷ್ಣ ಮಂಜೇಶ್ವರ ಇವರ ನಾಟ್ಯ ಗುರುಗಳು. ವಿದ್ಯಾಭ್ಯಾಸದ ಜೊತೆಗೆ ಮಾರ್ಷಲ್ ಆರ್ಟ್ ಕಲಿಕೆ, ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಭರತನಾಟ್ಯ ಕಲಿಕೆಗೆ ಸಮಯವನ್ನು ಹೊಂದಿಸಿಕೊಂಡು ಎರಡು ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವುದು ವೆನಿಲ್ಲಾ ಮಣಿಕಂಠ ಅವರ ಹೆಗ್ಗಳಿಕೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಿನಿ ಒಲಂಪಿಕ್‍ನಲ್ಲಿ ಜೂಡೋದ ತಾಂತ್ರಿಕ ಅಧಿಕಾರಿಯಾಗಿ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಬಂಟ್ವಾಳ ಸರಕಾರಿ ಪಾಲಿಟೆಕ್ನಿನ್‍ಲ್ಲಿ ವ್ಯಾಸಂಗ ಮಾಡಿರುವ ಈಕೆ ಎನ್‍ಐಟಿಕೆಯಲ್ಲಿ ಜಿಯೋಟೆಕ್ನಿಕಲ್ ವಿಭಾಗದಲ್ಲಿ ಎಂ.ಟೆಕ್ ವಿದ್ಯಾಭ್ಯಾಸ ನಡೆಸುತ್ತಿದ್ದು ಕಲಿಕೆಯಲ್ಲೂ ಎತ್ತಿದ ಕೈ.

manasa water park

Related Posts

Leave a Reply

Your email address will not be published.