ಯಕ್ಷಗಾನಕ್ಕೆ ಮನಸೋತು ತಾನೇ ವೇಷಧಾರಿಯಾದ ಸಚಿವ

ಯಕ್ಷಗಾನವೆಂದರೆ ಕರಾವಳಿ ಬಾಗದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದ ಕಲೆ, ಇದೀಗ ಸಚಿವರೊಬ್ಬರು ಈ ಕರಾವಳಿಯ ಕಲೆಗೆ ಮನಸೋತು ತಾನೆ ವೇಷ ಧರಿಸುವ ಮೂಲಕ ಸಂಭ್ರಮಿಸಿದ್ದಾರೆ.
ಆರೋಗ್ಯ ಸಚಿವರಾದ ಡಾ.ಸುಧಾಕರ್ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಸಂಬಂಧ ಪರಿಶೀಲನೆಗೆ ಆಗಮಿಸಿದ್ದ ಅವರು ಬಳಿಕ ಅಧಿಕಾರಿಗಳ ಸಭೆ ನಡೆಸಿ ರಾತ್ರಿ ಶಾಸಕ ಸುನೀಲ್ ನಾಯ್ಕ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.
ರಾತ್ರಿ ಶಾಸಕ ಸುನೀಲ್ ನಾಯ್ಕ್ ಅವರ ನಿವಾಸದಲ್ಲಿ ಯಕ್ಷಗಾನ ಬಯಲಾಟವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಸಚಿವರು, ಯಕ್ಷಗಾನ ಬಯಲಾಟ ಮುಗಿದ ಬಳಿಕ ಸ್ವತಃ ವೇಷ ಹಾಕಿಕೊಂಡು ಗಮನಸೆಳೆದರು.ಸಚಿವರು ಯಕ್ಷಗಾನದ ವಸ್ತ್ರ, ಪಗಡೆ ಹಾಗೂ ಆಭರಣ ತೊಟ್ಟು ಯಕ್ಷಗಾನ ವೇಷಧಾರಿಯಾಗಿ ಸಂಭ್ರಮಿಸಿದರು ನೆರೆದಿದ್ದ ಜನಸ್ತೋಮವೂ ಖುಷಿಪಟ್ಟಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹ ಜತೆಗಿದ್ದರು. “ಯಕ್ಷಗಾನ ನಮ್ಮ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು, ತುಳುನಾಡಿನ ಜನಜೀವನದ ಅವಿಭಾಜ್ಯ ಅಂಗ. ಕರಾವಳಿಗೆ ಭೇಟಿ ನೀಡಿದ ಮೇಲೆ ಯಕ್ಷಗಾನ ನೋಡದೆ ಹೋದರೆ ಆ ಪ್ರವಾಸ ಸಂಪೂರ್ಣವಾಗುವುದಿಲ್ಲ. ನೆನ್ನೆ ರಾತ್ರಿ ಭಟ್ಕಳ ಶಾಸಕ ಶ್ರೀ ಸುನಿಲ್ ನಾಯ್ಕ್ ಅವರ ಮನೆಯಲ್ಲಿ ಯಕ್ಷಗಾನ ವೀಕ್ಷಿಸಿ ದೈವಿಕಲೆಯ ವೇಷ ಹಾಕುವ ಅವಕಾಶ ದೊರೆತದ್ದು ನನ್ನ ಪುಣ್ಯ.” ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.