ಮಾಜಿ ಸಚಿವರಿಗೆ ಮಾಹಿತಿಯ ಕೊರತೆಯಿದೆ : ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಆರೋಪ

ಮೂಡುಬಿದಿರೆ: ಡೀಮ್ಡ್ ಅರಣ್ಯ ಕಾನೂನನ್ನು ಸರಕಾರ ಸರಳೀಕೃತಗೊಳಿಸಿದರಿಂದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರ ಸೂಚನೆಯಂತೆ 94ಸಿ ಮತ್ತು 94ಸಿಸಿ ಪಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮೂಲ್ಕಿ,ಮೂಡುಬಿದಿರೆ, ಮಂಗಳೂರು ತಾಲೂಕುಗಳಲ್ಲಿ 3 ಸಾವಿರಕ್ಕೂ ಅಧಿಕ ಹಕ್ಕುಪತ್ರ ವಿತರಣೆಯಾಗಿದೆ ಆದರೆ ಮಾಜಿ ಸಚಿವ ಅಭಯಚಂದ್ರ ಮತ್ತು ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾಹಿತಿ ಕೊರತೆಯಿಂದ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಆರೋಪಿಸಿದ್ದಾರೆ.
ಅವರು ವಿದ್ಯಾಗಿರಿಯಲ್ಲಿರುವ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಡೀಮ್ಡ್ ಅರಣ್ಯ ಪಟ್ಟಿಯಿಂದ ಸರ್ವೆನಂಬರ್ಗಳನ್ನು ತೆಗೆಯಲು ರಾಜ್ಯ ಸರ್ಕಾರ ಈಗಾಗಲೇ 3ಸಾವಿರ ಭೂಮಾಪಕರನ್ನು ತಾತ್ಕಾಲಿಕವಾಗಿ ನೇಮಿಸಿ ಭೂ ಮರುಪರಿಶೀಲನೆ ನಡೆಸುತ್ತಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಗರ್ ಹುಕುಂ, ಕುಮ್ಕಿ, ಬಾನೆ, ಗೋಮಾಲ ವಿರಹಿತ ಯೋಜನೆಯಲ್ಲಿ ಭೂಮಿ ಮಂಜೂರು ಮಾಡುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಈಗಾಗಲೇ ಘೋಷಣೆ ಮಾಡಿದ್ದು ಅದು ಕಾರ್ಯರೂಪಕ್ಕೆ ಬರಲಿದೆ. ಪುರಸಭಾ ವ್ಯಾಪ್ತಿಯ 3 ಕಿಮೀ `ಬಫರ್ ಝೋನ್’ ಪ್ರದೇಶದಲ್ಲಿ ಅರ್ಜಿ ಸಲ್ಲಿಸಿದವರಿಗೂ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಾಸಕರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಆದರೆ ಅಕ್ರಮ-ಸಕ್ರಮ ಅರ್ಜಿಗಳು ಇತ್ಯರ್ತವಾಗುವ ಹೊತ್ತಿನಲ್ಲಿ ಏನೂ ಕೆಲಸ ಆಗುತ್ತಿಲ್ಲ ಎಂಬಂತೆ ಅಭಯಚಂದ್ರ ಮತ್ತು ಮಿಥುನ್ ರೈ ಪತ್ರಿಕಾಗೋಷ್ಠಿಯಲ್ಲಿ ತಪ್ಪು ಹೇಳಿಕೆ ನೀಡಿ ಕೀಳು ಮಟ್ಟದ ರಾಜಕೀಯ ನೀಡುತ್ತಿರುವುದು ಖಂಡನಾರ್ಹ ಎಂದರು.
ಈ ಸಂದರ್ಭ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್ ಶೆಟ್ಟಿಗಾರ್ ಮತ್ತು ಕೇಶವ ಕರ್ಕೇರಾ ಉಪಸ್ಥಿತರಿದ್ದರು.